ಕೋವಿಡ್ ವಿರುದ್ಧ ಹೋರಾಡಲು, ನ್ಯಾಯಾಧೀಶರು ಮತ್ತು ವಕೀಲರು ಯುದ್ಧಭೂಮಿಯಲ್ಲಿನ ಯೋಧರಂತೆ ಸೆಣಸಬೇಕಿದ್ದು, ತಮ್ಮ ಕಾರ್ಯತಂತ್ರವನ್ನು ನಿರಂತರವಾಗಿ ಅಳವಡಿಸಿಕೊಳ್ಳುತ್ತಾ ಉತ್ತಮಪಡಿಸಿಕೊಳ್ಳುತ್ತಿರಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ವಕೀಲರ ಸಂಘ (ಎಎಬಿ) ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ವೆಬಿನಾರ್‌ನಲ್ಲಿ ಅವರು “ಕೋವಿಡ್ ಸಮಯದಲ್ಲಿ ನ್ಯಾಯಿಕ ಸಮುದಾಯ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯವಾಗಿ ಮಾತನಾಡಿದರು. “ನಾವು ಮೊದಲ ಅಲೆ ವೇಳೆ ಯಶಸ್ವಿಯಾಗಿದ್ದು ಎರಡನೇ ಅಲೆಯ ಸಂದರ್ಭದಲ್ಲಿಯೂ ಯಶಸ್ವಿಯಾಗುತ್ತೇವೆ”ಎಂದು ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ಹಾಗೂ ಅದರ ಎರಡನೇ ಅಲೆ ನಡುವೆಯೂ ಸಾಕಷ್ಟು ಮಂದಿ ನ್ಯಾಯಾಕ್ಕಾಗಿ ನ್ಯಾಯಾಂಗದ ಮೇಲೆ ಭರವಸೆ ಇರಿಸಿಕೊಂಡಿದ್ದಾರೆ ಎಂದ ಅವರು ಏಪ್ರಿಲ್ 1ರಿಂದ ಮೇ 18 ರವರೆಗೆ ರಾಜ್ಯದಲ್ಲಿ ವಕೀಲ ಸಮುದಾಯದ 190 ಸದಸ್ಯರು ಅಸುನೀಗಿದ್ದಾರೆ. ವಿವಿಧ ನ್ಯಾಯಾಲಯಗಳ 16 ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ. ಈ ಅವಧಿಯಲ್ಲಿ 90 ನ್ಯಾಯಾಂಗ ಅಧಿಕಾರಿಗಳು ಸೋಂಕಿಗೆ ಒಳಗಾಗಿದ್ದರು, ಅದೃಷ್ಟವಶಾತ್, ಅವರಲ್ಲಿ ಹೆಚ್ಚಿನವರು ಚೇತರಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 616 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು ಎಂಬುದಾಗಿ ಮಾಹಿತಿ ನೀಡಿದರು.
ಮೊದಲ ಅಲೆ ಅವಧಿಯಲ್ಲಿ ಪ್ರತಿದಿನ 10,000 ಪ್ರಕರಣಗಳು ಕಂಡುಬಂದಿದ್ದರೆ ಎರಡನೇ ಅಲೆ ವೇಳೆ ದಿನವೊಂದಕ್ಕೆ 30,000 ಪ್ರಕರಣಗಳು ದಾಖಾಲಾಗುತ್ತಿವೆ ಎಂದು ತಿಳಿಸಿದ ಅವರು “ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿರುವ ಮಹಾರಾಷ್ಟ್ರವನ್ನು ಕೂಡ ಕರ್ನಾಟಕ ಹಿಂದಿಕ್ಕಿದೆ. ಆದ್ದರಿಂದ ಎರಡನೇ ಅಲೆ ನ್ಯಾಯಾಂಗದ ಮೇಲೆ ಅತಿ ಕೆಟ್ಟ ರೀತಿಯ ಪರಿಣಾಮ ಬೀರಿದೆ. ದಾವೆ ಹೂಡವವರ ಮೇಲೂ ಅದು ಪರಿಣಾಮ ಬೀರಿದೆ” ಎಂದು ಹೇಳಿದರು.
ನ್ಯಾಯಾಲಯಗಳು ಕನಿಷ್ಠ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗದು ಏಕೆಂದರೆ ಇದು ನಾಗರಿಕರಿಗೆ ನ್ಯಾಯ ನಿರಾಕರಿಸಿದಂತೆ ಆಗುತ್ತದೆ ಎಂದು ಅವರು ಹೇಳಿದರು.
“ವೈದ್ಯರು, ದಾದಿಯರು ಮತ್ತಿತರ ಮುಂಚೂಣಿ ಹೋರಾಟಗಾರರಷ್ಟೇ ನಮ್ಮ ಪಾತ್ರ (ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು ಹಾಗೂ ನ್ಯಾಯವಾದಿ ವರ್ಗ) ಮುಖ್ಯವಾಗಿದೆ. ನ್ಯಾಯ ನೀಡುವುದು ನಮ್ಮ ಮೊದಲ ಕರ್ತವ್ಯ. ಲಾಕ್‌ಡೌನ್ ಇದೆಯೋ ಇಲ್ಲವೋ, ಎರಡನೇ ಅಲೆ ಇದೆಯೋ ಇಲ್ಲವೋ, ನ್ಯಾಯಕ್ಕಾಗಿ ಸರದಿಯಲ್ಲಿ ಕಾಯುತ್ತಿರುವ ಜನರಂತೂ ಇರುತ್ತಾರೆ. ಜೈಲುಗಳಲ್ಲಿ ದಿನದೂಡುತ್ತಿರುವ ಜನರಿದ್ದಾರೆ. ಅವರ ವೈಯಕ್ತಿಕ ಸ್ವಾತಂತ್ರ್ಯ ಮುಖ್ಯವಾಗಿದೆ. ಭಾರಿ ಸಂಖ್ಯೆಯಲ್ಲಿ ಉದ್ಯೋಗ ಮತ್ತು ಆದಾಯ ಕಳೆದುಕೊಂಡಿರುವ ಕಾರ್ಮಿಕರಿದ್ದಾರೆ” ಎಂದು ಅವರು ವಿವರಿಸಿದರು.
ಎಲ್ಲರೂ ಡಬಲ್ ಮಾಸ್ಕ್ ಧರಿಸಿ ಎಂದು ನಿಮ್ಮಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ. ವಿಚಾರಣೆಗೆ ಹಾಜರಾಗುವ ನ್ಯಾಯಾಧೀಶರು ಬಹುತೇಕ ಡಬಲ್ ಮಾಸ್ಕ್ ಧರಿಸಿರುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಮುಖಗವಸು ಮತ್ತು ಎನ್ -95 ಮುಖಗವಸು ಧರಿಸಬೇಕು
ವಕೀಲ ಸಮುದಾಯದ ಹಿರಿಯ ಸದಸ್ಯರನ್ನು ಗಮನಿಸಿ ಕೆಲ ದಿನಗಳವರೆಗೆ ಹೈಕೋರ್ಟ್‌ನ ಪ್ರಧಾನ ಪೀಠದಲ್ಲಿ ಪ್ರಕರಣಗಳ ಭೌತಿಕ ವಿಚಾರಣೆ ನಡೆಸದಿರುವುದು ಸೂಕ್ತ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ನ್ಯಾಯಾಲಯದ ಇಪ್ಪತ್ತು ಪೀಠಗಳು ವೀಡಿಯೊ ಕಾನ್ಫರೆನ್ಸ್ (ವಿಸಿ) ಮೂಲಕ ವಿಚಾರಣೆ ನಡೆಸಲಿವೆ ಎಂದರು. ಈ ಮೊದಲು ವರ್ಚುವಲ್ ವಿಧಾನದಲ್ಲಿ ಹನ್ನೆರಡು ಪೀಠಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.
ಇದೇ ವೇಳೆ ಅವರು "ವಕೀಲ ಸಮುದಾಯಕ್ಕೆ ಯಾವುದೇ ಸಹಾಯ ಅಗತ್ಯವಿದ್ದರೆ, ಯಾವುದೇ ಸಮಸ್ಯೆ ಎದುರಾದರೆ, ನೆರವು ನೀಡಲು ನಾವು ಹಗಲಿರುಳೂ ಲಭ್ಯವಿರುತ್ತೇವೆ" ಎಂದು ಭರವಸೆ ನೀಡಿದರು.