Guns
Guns 
ಸುದ್ದಿಗಳು

ರೈಫಲ್ ಅಸೋಸಿಯೇಷನ್, ಶೂಟಿಂಗ್ ಕ್ಲಬ್ ಸದಸ್ಯರು ಎರಡಕ್ಕಿಂತ ಹೆಚ್ಚು ಬಂದೂಕು ಇರಿಸಿಕೊಳ್ಳುವಂತಿಲ್ಲ: ದೆಹಲಿ ಹೈಕೋರ್ಟ್

Bar & Bench

ಭಾರತೀಯ ರಾಷ್ಟ್ರೀಯ ರೈಫಲ್‌ ಅಸೋಸಿಯೇಷನ್‌ (ಎನ್‌ಆರ್‌ಎಐ) ರೀತಿಯ ಸಂಘ ಅಥವಾ ಕ್ಲಬ್‌ ಸದಸ್ಯರಾಗಿರುವವರು ಶಸ್ತ್ರಾಸ್ತ್ರ ಕಾಯಿದೆ 1959ರ ಪ್ರಕಾರ ಎರಡಕ್ಕಿಂತ ಹೆಚ್ಚು ಬಂದೂಕುಗಳನ್ನು ಖಾಯಂ ಆಗಿ ಇರಿಸಿಕೊಳ್ಳಲು ಅನುಮತಿ ನೀಡುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ [ಮಲ್ಹೋತ್ರಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಕ್ಲಬ್‌ಗಳು, ರೈಫಲ್ಸ್ ಅಸೋಸಿಯೇಷನ್‌ಗಳು ಶೂಟಿಂಗ್‌ ರೇಂಜ್‌ಗಳು ಮಿತಿ ಇಲ್ಲದೆ ಬಂದೂಕು ಇರಿಸಿಕೊಳ್ಳಬಹುದಾಗಿದ್ದರೂ ಅಂತಹ ಸಂಘ ಅಥವಾ ಕ್ಲಬ್‌ಗಳ ವೈಯಕ್ತಿಕ ಸದಸ್ಯರಿಗೆ ಆ ಅವಕಾಶ ಇಲ್ಲ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

2019 ರ ತಿದ್ದುಪಡಿಯ ನಂತರ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 3(2) ರ ಪ್ರಕಾರ ಒಬ್ಬ ವ್ಯಕ್ತಿಗೆ ಎರಡಕ್ಕಿಂತಲೂ ಹೆಚ್ಚಿನ ಬಂದೂಕು ಹೊಂದಿದ್ದರೆ ಆತ ಎಸಿಪಿ (ಪರವಾನಗಿ) ಅವರಿಂದ ಅನುಮತಿ ಪಡೆಯಬೇಕು. ರೈಫಲ್ ಕ್ಲಬ್ ಅಥವಾ ಸಂಘದ ಸದಸ್ಯರಿಗೂ ಈ ಷರತ್ತು ಅನ್ವಯಿಸುತ್ತದೆ ಎಂಬ 2021 ರ ಆಗಸ್ಟ್ 31ರ ಆದೇಶ ಪ್ರಶ್ನಿಸಿ ಮೀತ್ ಮಲ್ಹೋತ್ರಾ ಸಲ್ಲಿಸಿದ ಅರ್ಜಿಯನ್ನು ಆ ಮೂಲಕ ನ್ಯಾಯಾಲಯ ತಿರಸ್ಕರಿಸಿತು.

ಅರ್ಜಿದಾರರು ಮೂರು ಬಂದೂಕುಗಳ ಪರವಾನಗಿ ಪಡೆದಿದ್ದು 2011ರಲ್ಲಿ ಎನ್‌ಆರ್‌ಎಐ ಸದಸ್ಯರಾಗಿದ್ದರು. ಕಾಯಿದೆಯಡಿ ಗುರುತಿಸಿಕೊಂಡ ಸದಸ್ಯರು ಸೆಕ್ಷನ್ 3 (2)ಗೆ ಹೊರತಾಗಿರುತ್ತಾರೆ ಎನ್ನುವುದು ಸೂಕ್ತವಾಗಿದೆ. ಅಂತಹ ಕ್ಲಬ್‌ಗಳ ಸದಸ್ಯರು ಎರಡಕ್ಕಿಂತ ಹೆಚ್ಚಿನ ಬಂದೂಕುಗಳನ್ನು ಇರಿಸಿಕೊಂಡಿದ್ದರೆ ಅವುಗಳನ್ನುಒಪ್ಪಿಸಬೇಕು ಎಂಬ ನೆಲೆಯಲ್ಲಿ 2019 ರ ತಿದ್ದುಪಡಿಯನ್ನು ಓದಕೂಡದು ಎಂಬುದು ಮಲ್ಹೋತ್ರಾ ಅವರ ವಾದವಾಗಿತ್ತು. ಆದರೆ ನ್ಯಾಯಾಲಯ ಈ ವಾದವನ್ನು ಒಪ್ಪಲಿಲ್ಲ.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ಎರಡಕ್ಕಿಂತಲೂ ಹೆಚ್ಚು ಬಂದೂಕುಗಳನ್ನು ಇಟ್ಟುಕೊಳ್ಳಲು ವ್ಯಕ್ತಿಗೆ ಅವಕಾಶ ನೀಡುವುದು ಅಸಂಬದ್ಧ ಕಾರಣವಾಗುತ್ತದೆ. ಹಾಗೆ ಸದಸ್ಯನಿಗೆ ಅವಕಾಶ ನೀಡಿದರೆ ಆತ ಬಂದೂಕು ಮಾರಾಟಗಾರನಿಗೆ ಸಮನಾಗುತ್ತಾನೆ. ಇದು ಕಾಯಿದೆಯ ಉದ್ದೇಶಗಳನ್ನು ಮೀರಿದ್ದಾಗಿರುತ್ತದೆ.

  • ಶಸ್ತ್ರಾಸ್ತ್ರ ನಿಯಮಾವಳಿ- 2016ರ ಪ್ರಕಾರ ಈ ಸದಸ್ಯರಿಗೆ ಉಳಿದ ವ್ಯಕ್ತಿಗಳಿಗಿಂತಲೂ ಹೆಚ್ಚಿನ ಮದ್ದು ಗುಂಡು ಇರಿಸಿಕೊಳ್ಳಲು ಅವಕಾಶ ಇರಬಹುದು. ಆದರೆ ಶಸ್ತ್ರಾಸ್ತ್ರ ಕಾಯಿದೆಯಡಿ ಇಂತಹ ಸದಸ್ಯರಿಗೆ ಯಾವುದೇ ವಿಶಿಷ್ಟ ಸ್ಥಾನಮಾನ ಒದಗಿಸಲಾಗಿದೆ ಎಂದು ಅರ್ಥೈಸುವಂತಿಲ್ಲ.

  • ಎನ್‌ಆರ್‌ಎಐ, ರಾಜ್ಯ ರೈಫಲ್ ಅಸೋಸಿಯೇಷನ್‌ಗಳು, ಸಂಯೋಜಿತ ಜಿಲ್ಲಾ ರೈಫಲ್ ಅಸೋಸಿಯೇಷನ್‌ಗಳು, ಶೂಟಿಂಗ್ ಕ್ಲಬ್‌ಗಳು, ಶೂಟಿಂಗ್ ರೇಂಜ್‌ಗಳು ಅಥವಾ ಆಯಾ ರಾಜ್ಯದ ಕ್ರೀಡಾ ಪ್ರಾಧಿಕಾರಗಳಿಗೆ ಸಂಬಂಧಿಸಿದ ಶಸ್ತ್ರಾಸ್ತ್ರ ತಯಾರಕರು ಮತ್ತು ವಿತರಕರು ಮಾತ್ರ ಮಿತಿ ಇಲ್ಲದೆ ಶಸ್ತ್ರಾಸ್ತ್ರ ಇರಿಸಿಕೊಳ್ಳಬಹುದಾದ ಪರವಾನಗಿ ಪಡೆದ ವರ್ಗವಾಗಿದೆ.