ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಸೌಕರ್ಯವಿಲ್ಲ ಮತ್ತು ಭಾರತದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿಲ್ಲ ಎಂಬ ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ಈಚೆಗೆ ಕಳವಳ ವ್ಯಕ್ತಪಡಿಸಿದೆ.
ಹೀಗಾಗಿ, ಬಜೆಟ್‌ನಲ್ಲಿ ಮಾನಸಿಕ ಆರೋಗ್ಯ ಕುರಿತಾದ ಚಟುವಟಿಕೆಗಳು ಮತ್ತು ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಮೀಸಲಿಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸಲಹೆ ಮಾಡಿದೆ. ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗ ತೆರೆಯಲು ಸಹ ಪೀಠ ಆದೇಶ ಮಾಡಿದೆ.
ತಿರುಚಿ ಅಥವಾ ಮದುರೈ ಕೇಂದ್ರ ಕಾರಾಗೃಹದಲ್ಲಿ ಮಾನಸಿಕ ಆರೋಗ್ಯ ಘಟಕವನ್ನು ತೆರೆಯುವ ಮೂಲಕ ಕೈದಿಗಳ ಮಾನಸಿಕ ಆರೋಗ್ಯ ಕಾಪಾಡಲು ನೆರವಾಗುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎನ್ ಕಿರುಬಾಕರನ್ (ಈಗ ನಿವೃತ್ತರಾಗಿದ್ದಾರೆ) ಮತ್ತು ಬಿ ಪುಗಲೇನಿಧಿ ಅವರಿದ್ದ ವಿಭಾಗೀಯ ಪೀಠ ಆದೇಶ ಮಾಡಿದೆ.
ಸದರಿ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಯಾವುದೇ ನಿರ್ದೇಶನ ನೀಡದಿದ್ದರೂ ವಿಸ್ತೃತ ನೆಲೆಯಲ್ಲಿ ಹಲವು ಆತಂಕಗಳನ್ನು ವ್ಯಕ್ತಪಡಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಖಿನ್ನತೆಗೆ ಒಳಗಾಗಿರುವ ದೇಶಗಳ ಪೈಕಿ ಭಾರತವೂ ಒಂದು. ದೇಶದ. ಶೇ. 7.5ರಷ್ಟು ಜನಸಂಖ್ಯೆ ಒಂದಲ್ಲಾ ಒಂದು ಥರದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲುಎಚ್‌ಒ) ವರದಿಯನ್ನು ಉಲ್ಲೇಖಿಸಿ ಪೀಠ ಹೇಳಿದೆ.
2017ರಲ್ಲಿ ಮಾನಸಿಕ ಆರೋಗ್ಯ ಕಾಯಿದೆ ಜಾರಿಗೊಳಿಸಿದ್ದರೂ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿಲ್ಲ. ಅಲ್ಲದೇ ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಯಾವುದೇ ತೆರನಾದ ಕೇಂದ್ರೀಕೃತ ವ್ಯವಸ್ಥೆ ಇಲ್ಲ ಎಂಬುದನ್ನೂ ಪೀಠವು ಆದೇಶದಲ್ಲಿ ದಾಖಲಿಸಿದೆ.
“ಮಾನಸಿಕ ಆರೋಗ್ಯದ ಜೊತೆ ಅಂಟಿಕೊಂಡಿರುವ ಸಾಮಾಜಿಕ ಕಳಂಕದಿಂದಾಗಿ ಜನರು ಅಗತ್ಯ ಚಿಕಿತ್ಸೆ ಪಡೆಯುವುದಿಲ್ಲ. ಹೀಗಾಗಿ, ಮಾನಸಿಕ ಆರೋಗ್ಯದ ಜೊತೆ ತಳುಕು ಹಾಕಿಕೊಂಡಿರುವ ಕಳಂಕವನ್ನು ತೊಡೆದು ಹಾಕುವುದು ಅಥವಾ ಮನೋವಿಜ್ಞಾನಿಯಿಂದ ಚಿಕಿತ್ಸೆ ಪಡೆದುಕೊಳ್ಳುವುದು ಅಥವಾ ಸಾಮಾಜಿಕ ನಿಷೇಧ ವಿರೋಧಿ ಜಾಗೃತಿ ಯೋಜನೆಗಳ ಮೂಲಕ ಮನೋವಿಜ್ಞಾನಿಗಳಿಂದ ಕೌನ್ಸೆಲಿಂಗ್ ಪಡೆಯಬೇಕು” ಎಂದು ಪೀಠ ಹೇಳಿದೆ.
“ಏಳು ಮಂದಿಯ ಪೈಕಿ ಒಬ್ಬರು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಬೇಕು… ಹೆಚ್ಚಿನ ಸಂಖ್ಯೆಯ ಜನರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಹೆಚ್ಚಿನ ಅನುದಾನವನ್ನು ಮಾನಸಿಕ ಆರೋಗ್ಯಕ್ಕೆ ಮೀಸಲಿಡಬೇಕು” ಎಂದು ನ್ಯಾಯಾಲಯ ಹೇಳಿದೆ.
ಪ್ರತಿ ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಲ್ಲಿ ಮನೋವಿಜ್ಞಾನ ಕೇಂದ್ರಗಳು ಇರಬೇಕು. ಪ್ರತಿ ತಾಲ್ಲೂಕು ಆಸ್ಪತ್ರೆಗಳಿಗೆ ಮನೋವಿಜ್ಞಾನಿಯನ್ನು ನೇಮಿಸಬೇಕು ಎಂದು ಪೀಠ ಹೇಳಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಗಳಂಥ (ನಿಮ್ಹಾನ್ಸ್) ರಾಷ್ಟ್ರೀಯ ಆರೋಗ್ಯ ಕೇಂದ್ರಗಳನ್ನು ದೇಶದ ಕನಿಷ್ಠ ಪ್ರತಿ ವಲಯಕ್ಕೊಂದರಂತೆ ಆರಂಭಿಸಬೇಕು ಎಂದು ನ್ಯಾಯಾಲಯ ಹೇಳಿದೆ.
“ದೇಶದಲ್ಲಿ ಮಾನಸಿಕ ರೋಗಕ್ಕೆ ಚಿಕಿತ್ಸಕರ ಸಂಖ್ಯೆ ಅತ್ಯಂತ ಕಡಿಮೆ ಇದೆ. ರಾಷ್ಟ್ರದಲ್ಲಿ 9,000 ಮಂದಿ ಮನೋವಿಜ್ಞಾನಿಗಳಿದ್ದಾರೆ ಎನ್ನಲಾಗಿದ್ದು, ಒಂದು ಲಕ್ಷ ಜನರಿಗೆ ಒಬ್ಬೇ ಒಬ್ಬರು ಮನೋವಿಜ್ಞಾನಿ ಲಭ್ಯವಿದ್ದಾರೆ. ವಾಸ್ತವದಲ್ಲಿ ಪ್ರತಿ ಒಂದು ಲಕ್ಷಕ್ಕೆ ಮೂವರು ಮನೋವಿಜ್ಞಾನಿಗಳು ಇರಬೇಕು. ಈಗ 18 ಸಾವಿರ ಮಾನಸಿಕ ಆರೋಗ್ಯ ವೈದ್ಯರು ಅಥವಾ ಮನೋವಿಜ್ಞಾನಿಗಳ ಕೊರತೆ ಇದೆ. ಅಲ್ಲದೇ, ಪ್ರತಿ ವರ್ಷ ನಮ್ಮ ದೇಶಕ್ಕೆ 2,700 ಹೊಸ ಮನೋವಿಜ್ಞಾನಿಗಳ ಅಗತ್ಯವಿದೆ. ಇದರ ಹೊರತಾಗಿ ಇಡೀ ದೇಶದಲ್ಲಿ ಮಕ್ಕಳ ಕಾಳಜಿ ವಹಿಸಲು ಕೇವಲ 49 ಮನೋವಿಜ್ಞಾನಿಗಳು ಇದ್ದಾರೆ” ಎಂದು ಪೀಠ ಹೇಳಿದೆ.
ಇದಲ್ಲದೇ, ಮಾನಸಿಕ ಆರೋಗ್ಯ ಕಾಯಿದೆ 2017ರ ಸೆಕ್ಷನ್ 21(4)ರ ಅಡಿ ಮಾನಸಿಕ ರೋಗಿಗಳಿಗೆ ವಿಮಾ ಯೋಜನೆಯ ಸೌಲಭ್ಯವಿದೆ ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ. “ಕಾಯಿದೆ ಅಡಿ ಮಾನಸಿಕ ಆರೋಗ್ಯಕ್ಕೆ ವಿಮಾ ಯೋಜನೆ ವಿಸ್ತರಿಸಲಾಗಿದೆ. ಇದು ಸಾಮಾನ್ಯ ಜನರಿಗೆ ಗೊತ್ತಿಲ್ಲ. ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವಿಮಾ ಸೌಲಭ್ಯವಿದೆ ಎಂಬುದರ ಕುರಿತು ಜಾಗೃತಿ ಮೂಡಿಸುವುದು ಪ್ರತಿವಾದಿಗಳ ಕರ್ತವ್ಯವಾಗಿದೆ” ಎಂದು ಪೀಠ ಹೇಳಿರುವ ಪೀಠವು ಮನವಿಯನ್ನು ವಿಲೇವಾರಿ ಮಾಡಿದೆ.