ರಸ್ತೆಗಳು ಪರಿಕಲ್ಪನೆಯಲ್ಲಿ ಪಾದಚಾರಿ ಮಾರ್ಗಗಳು (ಕಾಲುದಾರಿ), ಗಾಡಿಗಳ ದಾರಿಗಳೂ (ಬಂಡಿ ಜಾಡು) ಸೇರಿರುತ್ತವೆ ಎಂದು ಈಚೆಗೆ ಅಭಿಪ್ರಾಯ ಪಟ್ಟಿರುವ ಕರ್ನಾಟಕ ಹೈಕೋರ್ಟ್, ಭೂಸ್ವಾಧೀನ ಕಾಯಿದೆಯಡಿ ಭೂಮಿ ಸ್ವಾಧೀನಪಡಿಸಿಕೊಂಡ ಮಾತ್ರಕ್ಕೆ 'ಬಿ ಖರಾಬ್' ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ತಿಳಿಸಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ವಿಚಾರಣೆ ನಡೆಸಿತು.
ಕರ್ನಾಟಕ ಭೂಕಂದಾಯ ಕಾಯಿದೆಯ ಸೆಕ್ಷನ್ 67 ಎಲ್ಲಾ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಪಥ, ಸೇತುವೆ, ಕಂದಕ, ತಡೆಗೋಡೆ ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಹೇಳುತ್ತದೆ. ಕಾಲುದಾರಿ ಅಥವಾ ಬಂಡಿ ಜಾಡು ಎಂಬ ಗಾಡಿ ಜಾಡು ಹಿಂದಿನ ರಸ್ತೆಗಳಾಗಿದ್ದು, ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ವಾಸಿಸುವ ಜನರು ವಿವಿಧ ಪ್ರದೇಶಗಳಿಗೆ ಓಡಾಡಲು ಬಳಸುತ್ತಿದ್ದರು. ಅಲ್ಲದೆ, ಕಾಲುದಾರಿ, ಬಂಡಿ ಜಾಡನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು 'ಬಿ ಖರಾಬ್' ಭೂಮಿ ಎಂದು ವರ್ಗೀಕರಿಸಲಾಗಿದೆ. ಈ ಪ್ರದೇಶ ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಬಳಕೆಗೆ ನೀಡಲಾಗಿರುತ್ತದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 1999-2000ರ ಅವಧಿಯಲ್ಲಿ ಅರ್ಜಿದಾರ ಸಂಸ್ಥೆ ಎಪಿಎಂಸಿಯ ಅನುಕೂಲಕ್ಕಾಗಿ ಕೆಲವು ಜಮೀನು ಸ್ವಾಧೀನಪಡಿಸಿಕೊಂಡು, ಉಪ ಮಾರುಕಟ್ಟೆಗಾಗಿ ಬಡಾವಣೆ ರಚಿಸಿ, ಕಟ್ಟಡಗಳನ್ನು ನಿರ್ಮಿಸಿದ ಬಳಿಕ ಹಲವು ವ್ಯಕ್ತಿಗಳಿಗೆ ತಮ್ಮ ವ್ಯವಹಾರಗಳನ್ನು ನಡೆಸಲು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, 2019ರ ಫೆಬ್ರವರಿ 5ರಂದು ಕಾಲುದಾರಿಯನ್ನು ಮುಚ್ಚಿರುವ ಸಂಬಂಧ ತಹಶೀಲ್ದಾರ್ ಎಪಿಎಂಸಿಗೆ ನೋಟಿಸ್ ಜಾರಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಎಪಿಎಂಸಿಯು ಅರ್ಜಿಗೆ ಸಂಬಂಧಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಲಾಗಿದೆ. ಇಡೀ ಆಸ್ತಿ ಎಪಿಎಂಸಿಗೆ ಸೇರಿದ್ದಾಗಿದ್ದು, ಈ ಜಮೀನಿನಲ್ಲಿ ಯಾವುದೇ ಕಾಲು ದಾರಿ ಇಲ್ಲ ಎಂದು ಉತ್ತರಿಸಿತ್ತು. ಇದೇ ಅಂಶಗಳನ್ನು ಉಲ್ಲೇಖಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಕೇವಲ 10 ಎಕರೆ 15 ಗುಂಟೆ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಂಡು ಅರ್ಜಿದಾರ ಎಪಿಎಂಸಿಗೆ ಹಂಚಿಕೆ ಮಾಡಲಾಗಿದೆ ಮತ್ತು ಪಕ್ಕದ ಬಿ ಖರಾಬ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿಲ್ಲ ಅಥವಾ ಅರ್ಜಿದಾರರಿಗೆ ವರ್ಗಾಯಿಸಲಾಗಿಲ್ಲ. ಕರ್ನಾಟಕ ಭೂಕಂದಾಯ ಕಾಯಿದೆಯ ಸೆಕ್ಷನ್ 68ರ ಪ್ರಕಾರ ’ಬಿ ಖರಾಬ್’ನಲ್ಲಿ ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ. ಆದ್ದರಿಂದ, ಈ ಸ್ಥಳದ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಅಥವಾ ಸಾರ್ವಜನಿಕರು ಕಾಲುದಾರಿ’ ಬಳಸಲು ಅರ್ಹರಾಗಿರುತ್ತಾರೆ. ಅರ್ಜಿದಾರರು ಈ ಭೂಮಿಯನ್ನು ಮೀಸಲಿಡಬೇಕಾಗಿತ್ತು ಮತ್ತು ಅದನ್ನು ಮಾರುಕಟ್ಟೆ ಪ್ರಾಂಗಣದ ಉದ್ದೇಶಗಳಿಗಾಗಿ ಬಳಸಬಾರದು ಎಂದು ಪೀಠಕ್ಕೆ ವಿವರಿಸಿದ್ದರು.