ಸುದ್ದಿಗಳು

ಕ್ರೀಡಾ ಮೀಸಲಾತಿ ಪಡೆಯಲು ರಾಷ್ಟ್ರಮಟ್ಟದ ಭಾಗವಹಿಸುವಿಕೆಯಷ್ಟೇ ಸಾಲದು: ಕಾಶ್ಮೀರ ಹೈಕೋರ್ಟ್

Bar & Bench

ಕ್ರೀಡಾಪಟು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕೇವಲ ಭಾಗವಹಿಸಿದ ಮಾತ್ರಕ್ಕೆ ಜಮ್ಮು ಮತ್ತು ಕಾಶ್ಮೀರ ಕ್ರೀಡಾ ನೀತಿಯ ಅಡಿಯಲ್ಲಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ಸುಹೈಬ್‌ ಸಾಹಿಲ್‌ ಮತ್ತು ಜಮ್ಮು ಕಾಶ್ಮೀರ ಕ್ರೀಡಾ ಸಮಿತಿ ಮೂಲಕ ಕೇಂದ್ರಾಡಳಿತ ಪ್ರದೇಶ ಸರ್ಕಾರ].

ಅತ್ಯುತ್ತಮ ಪ್ರದರ್ಶನ ನೀಡುವುದಷ್ಟೇ ಅಲ್ಲದೆ, ನಿರ್ದಿಷ್ಟ ಕ್ರೀಡೆಯಲ್ಲಿ ಪ್ರವೀಣರಾಗಿರುವ ಅಥವಾ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಮಾತ್ರ ಮೀಸಲಾತಿ ಲಭಿಸುತ್ತದೆ ಎಂದು ನ್ಯಾಯಮೂರ್ತಿ ರಾಜೇಶ್ ಸೆಖ್ರಿ ಹೇಳಿದರು.

'ಕ್ರೀಡಾ ಕೋಟಾ' ಎಂಬುದು ಸರ್ಕಾರ ರೂಪಿಸಿದ ಮತ್ತು ಶಿಕ್ಷಣ ಸಂಸ್ಥೆಗಳು ಕ್ರೀಡೆಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿದ ವ್ಯಕ್ತಿಗಳಿಗೆ ನಿರ್ದಿಷ್ಟ ಶೇಕಡಾವಾರು ಸೀಟುಗಳನ್ನು ಮೀಸಲಿಡಲು ಬಳಸುತ್ತಿರುವ ನೀತಿಯಾಗಿದೆ ಎಂದು ನ್ಯಾಯಾಲಯ ನುಡಿದಿದೆ.

"ವೈಯಕ್ತಿಕ ಆಟೋಟಗಳಲ್ಲಿ ಭಾಗವಹಿಸಿ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಗಳಿಸಿದ ಅಥವಾ 1, 2 ಅಥವಾ 3 ನೇ ಸ್ಥಾನವನ್ನು ಪಡೆದ ತಂಡದ ಸದಸ್ಯರಾಗಿರುವ ಅಥವಾ ಯಾವುದೇ ಕ್ರೀಡೆಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಒಂದೇ ವಿಭಾಗದಲ್ಲಿ ಎರಡು ಅಥವಾ ಹೆಚ್ಚು ಬಾರಿ ಭಾಗವಹಿಸಿದ ಕ್ರೀಡಾಪಟು ಅಥವಾ ಹೇಳಿದ ನಿಯಮಗಳಿಗೆ ಲಗತ್ತಿಸಲಾದ ಶೆಡ್ಯೂಲ್ 1ರಲ್ಲಿ ಉಲ್ಲೇಖಿಸಲಾದ ಆಟಗಳಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ" ಎಂಬುದಾಗಿ ಅದು ಹೇಳಿದೆ.

ಬಾಲ್ ಬ್ಯಾಡ್ಮಿಂಟನ್ ಆಟಗಾರ ಸುಹೈಬ್ ಸಾಹಿಲ್ ಅವರು ಕ್ರೀಡಾ ಕೋಟಾದಡಿ ಪಿಎಚ್‌ಡಿ ಸೀಟಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸಾಹಿಲ್‌ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.  

ಸಾಹಿಲ್ ರಾಷ್ಟ್ರೀಯ ಮಟ್ಟದಲ್ಲಿ ಒಮ್ಮೆ ಮಾತ್ರ ಪಾಲ್ಗೊಂಡಿದ್ದರಿಂದ ಕ್ರೀಡಾ ಕೋಟಾದಡಿ ಆಯ್ಕೆಯಾಗಲು ಅವರು ಅರ್ಹರಲ್ಲ ಎಂದು ವಿವಿಗೆ ಜಮ್ಮು ಕಾಶ್ಮೀರ ಕ್ರೀಡಾ ಸಮಿತಿ ತಿಳಿಸಿತ್ತು.

ತಮ್ಮ ಪ್ರಮಾಣಪತ್ರವನ್ನಷ್ಟೇ ಕ್ರೀಡಾ ಸಮಿತಿ ಪರಿಶೀಲಿಸಬೇಕಿತ್ತೇ ವಿನಾ ತಮ್ಮನ್ನು ಅನರ್ಹ ಎಂದು ಅದು ಘೋಷಿಸುವಂತಿಲ್ಲ ಎಂದು ಸಾಹಿಲ್‌ ನ್ಯಾಯಾಲಯದೆದುರು ವಾದ ಮಂಡಿಸಿದ್ದರು.

ಕ್ರೀಡಾ ನೀತಿಯನ್ನು ಪರಿಶೀಲಿಸಿದ ನ್ಯಾಯಾಲಯ ಅದು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಮಾತ್ರಕ್ಕೆ ಮೀಸಲಾತಿ ನೀಡುವಂತೆ ಹೇಳಿದರೂ 2008 ರ ಕ್ರೀಡಾ ನಿಯಮಗಳಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಪಡೆದವರ ಬಗೆಗಿನ ವ್ಯಾಖ್ಯಾನವನ್ನೂ ಗಮನಿಸಿತು.

ಪ್ರಸ್ತುತ ಪ್ರಕರಣದ ಅರ್ಜಿದಾರ ರಾಷ್ಟ್ರೀ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಇಲ್ಲವೇ ತಂಡದ ಕ್ರೀಡೆಗಳಿಗೆ ಸಂಬಂಧಿಸಿದಂತೆ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನೂ ಪಡೆದಿಲ್ಲ ಎಂದು ನ್ಯಾಯಾಲಯ ನುಡಿಯಿತು.

ಹೀಗಾಗಿ, ಕ್ರೀಡಾ ಸಮಿತಿ ವಿಶ್ವವಿದ್ಯಾನಿಲಯಕ್ಕೆ ಬರೆದ ಪತ್ರ ನಿಯಮಗಳನ್ನು ಉಲ್ಲಂಘಿಸಿಲ್ಲ. ಅರ್ಜಿದಾರರು ಕ್ರೀಡಾ ವಿಭಾಗದ ಅಡಿಯಲ್ಲಿ ಆಯ್ಕೆಗೆ ಅರ್ಹರಲ್ಲ ಎಂದು ತಿಳಿಸಿ ಮನವಿ ತಿರಸ್ಕರಿಸಿತು.