UAPA 
ಸುದ್ದಿಗಳು

ಲಾಡೆನ್ ಭಾವಚಿತ್ರಗಳು, ಐಸಿಸ್ ಧ್ವಜ ಇರಿಸಿಕೊಂಡ ಮಾತ್ರಕ್ಕೆ ಯುಎಪಿಎ ಅಡಿ ಅಪರಾಧವಾಗದು: ದೆಹಲಿ ಹೈಕೋರ್ಟ್

ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿ ಐಸಿಸ್‌ಗೆ ಸೇರಲು ಬಯಸಿದ್ದ ಆರೋಪದ ಮೇಲೆ ಯುಎಪಿಎ ಅಡಿಯಲ್ಲಿ ಎನ್‌ಐಎ ಬಂಧಿಸಿದ್ದ ವ್ಯಕ್ತಿಗೆ ನ್ಯಾಯಾಲಯ ಜಾಮೀನು ನೀಡಿದೆ.

Bar & Bench

ಒಸಾಮಾ ಬಿನ್ ಲಾಡೆನ್ ಭಾವಚಿತ್ರ , ಐಸಿಸ್ ಧ್ವಜ ಇರಿಸಿಕೊಳ್ಳುವುದು ಇಲ್ಲವೇ ಕಟ್ಟಾ ಮುಸ್ಲಿಂ ಧರ್ಮಗುರುಗಳ ಉಪನ್ಯಾಸಗಳನ್ನು ಕೇಳುವುದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್‌ ಈಚೆಗೆ ಹೇಳಿದೆ [ಅಮ್ಮರ್ ಅಬ್ದುಲ್ ರಹಿಮಾನ್ ಮತ್ತು ಎನ್‌ಐಎ ನಡುವಣ ಪ್ರಕರಣ].

ಈ ಭಾವಚಿತ್ರ, ವಿಡಿಯೋ ಇಲ್ಲವೇ ಛಾಯಾಚಿತ್ರಗಳು ವ್ಯಕ್ತಿಯ ಮನಸ್ಸಿನಲ್ಲಿ ಏನು ಓಡುತ್ತಿದೆ ಎನ್ನುವ ಕುರಿತು ಹೇಳುವುದಾದರೂ ಐಸಿಸ್‌ನಲ್ಲಿ ಭಾಗಿಯಾಗಲು ಹೊರಟಿದ್ದಾರೆ ಎಂಬುದನ್ನು ಸಾಬೀತುಪಡಿಸಲು ವಿಫಲವಾಗುತ್ತವೆ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಮೇಲ್ಮನವಿದಾರ ಐಸಿಸ್‌ನಲ್ಲಿ ಭಾಗಿಯಾಗಲು ಹೋಗಿಲ್ಲದಿರುವಾಗ ಮೊಬೈಲ್‌ ಸಾಧನದಲ್ಲಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಚಿತ್ರ, ಐಸಿಸ್‌ ಧ್ವಜಗಳ ಚಿತ್ರಗಳು, ಜಿಹಾದ್‌ ಪ್ರಚಾರದ ವಿಷಯಗಳಿವೆ ಎಂದು ಮತ್ತು ಆತ ಕಠೋರ ಮುಸ್ಲಿಂ ಧರ್ಮಗಳ ಉಪನ್ಯಾಸಗಳನ್ನು ಕೇಳುತ್ತಿದ್ದ ಎಂದ ಮಾತ್ರಕ್ಕೆ ಆತ ಉಗ್ರ ಸಂಘಟನೆಗಳ ಸದಸ್ಯ ಎಂದು ಹಣೆಪಟ್ಟಿ ಹಚ್ಚಲಾಗದು ಎಂದು ನ್ಯಾಯಾಲಯ ನುಡಿದಿದೆ.

ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ, ಅಂತಹ ದೋಷಾರೋಪಣೆಯ ವಸ್ತುವಿಷಯಗಳು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದ್ದು ಅವುಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದ ಮಾತ್ರಕ್ಕೆ ವ್ಯಕ್ತಿಗೆ ಐಸಿಸ್‌ನೊಂದಿಗೆ ನಂಟಿದೆ ಎಂದು ಹೇಳಲಾಗದು ಎಂದು ಅದು ಹೇಳಿದೆ.

ಮುಂದುವರೆದು ನ್ಯಾಯಾಲಯವು, “ಯಾವುದೇ ಕುತೂಹಲದ ಮನಸ್ಸು ಅಂತಹ ವಸ್ತುವಿಷಯವನ್ನು ಗಮನಿಸಿ  ಡೌನ್‌ಲೋಡ್ ಮಾಡಬಹುದು. ಆ ಕಾರ್ಯ ನಮಗೆ ಅಪರಾಧವಲ್ಲ ಎಂದು ತೋರುತ್ತದೆ. ಅಂತಹ ಕ್ರಿಯೆ ಅವನ ಮನಸ್ಥಿತಿಯ ಬಗ್ಗೆ ನಮಗೆ ಸ್ವಲ್ಪ ಒಳನೋಟವನ್ನು ನೀಡಬಹುದು. ಆದರೆ, ಮೂಲಭೂತವಾಗಿ, ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ದಂಡನೆಯ ನಿಬಂಧನೆಗಳನ್ನು ಅನ್ವಯಿಸುವಂತಹ ಸಂದರ್ಭದಲ್ಲಿ ಹಾಗೂ ಜಾಮೀನು ದೊರಕುವುದು ಸಹ ಒಂದು ರೀತಿಯ ಅಪವಾದವಾಗುವಂತಹ ಸನ್ನಿವೇಶವನ್ನು ಪರಿಗಣಿಸುವಾಗ ಪ್ರಾಸಿಕ್ಯೂಷನ್‌ ಬಳಿ ಸ್ಪಷ್ಟವಾದ, ವಿವರಿಸಬಹುದಾದ ನಿಶ್ಚಿತ ಸಾಕ್ಷ್ಯಗಳ 'ಮದ್ದುಗುಂಡುಗಳು' ಇರಬೇಕಾಗುತ್ತದೆ” ಎಂದು ಕಿವಿಮಾತು ಹೇಳಿತು.

ವಸ್ತುವಿಷಯವನ್ನು ಡೌನ್‌ಲೋಡ್ ಮಾಡಿದ್ದ, ಆರೋಪಿ ಅಮ್ಮಾರ್ ಅಬ್ದುಲ್ ರಹಿಮಾನ್ ಯಾವುದೇ ರೀತಿಯಲ್ಲಿ ಆ ಮಾಹಿತಿಯನ್ನು ಯಾರಿಗಾದರೂ ಹಂಚಿದ್ದಾನೆ ಅಥವಾ ಅಂತಹ ಯಾವುದೇ ಮಾಹಿತಿಯನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇಲ್ಲವೇ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಿದ್ದಾನೆ ಎನ್ನುವಂತಹ ಯಾವ ವಿಚಾರಗಳೂ ಕಂಡುಬಂದಿಲ್ಲ ಎಂದು ಅದು ತಿಳಿಸಿದೆ.

“ಇಂತಹ ಪರಿಸ್ಥಿತಿಯಲ್ಲಿ, ಈ ಹಂತದಲ್ಲಿ, ಮೇಲ್ಮನವಿದಾರ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಅಥವಾ ಭಯೋತ್ಪಾದಕ ಸಂಘಟನೆ ಆತನೊಂದಿಗೆ ನಂಟು ಹೊಂದಿದೆ ಎಂಬ ತೀರ್ಮಾನಕ್ಕೆ ಬರಲು ತುಂಬಾ ಕಷ್ಟವಾಗುತ್ತದೆ. ಅಂತಹ ಭಯೋತ್ಪಾದಕ ಸಂಘಟನೆಗೆ ಆತ ಬೆಂಬಲ ನೀಡುತ್ತಿದ್ದ ಎನ್ನುವುದನ್ನು ಸೂಚಿಸುವ ಯಾವುದೇ ಸಾಕ್ಷ್ಯವನ್ನು ಪತ್ತೆ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಾಗುತ್ತಿಲ್ಲ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

 ಈ ಅಂಶಗಳ ಆಧಾರದಲ್ಲಿ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿ ಐಸಿಸ್‌ಗೆ ಸೇರಲು ಬಯಸಿದ್ದ ಆರೋಪದ ಮೇಲೆ ಯುಎಪಿಎ ಅಡಿಯಲ್ಲಿ ಎನ್‌ಐಎ ಬಂಧಿಸಿದ್ದ ರಹಿಮಾನ್‌ಗೆ ನ್ಯಾಯಾಲಯ ಜಾಮೀನು ನೀಡಿತು.