ಭಾರತದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಇನ್ನೂ ಆರೋಪಿಯಾಗಿ ಇರುವವರು ಜಾಮೀನಿನ ಮೇಲೆ ತಾತ್ಕಾಲಿಕವಾಗಿ ಬಿಡುಗಡೆಯಾದರೂ ಅವರನ್ನು ತಾಯ್ನಾಡಿಗೆ ಹಸ್ತಾಂತರಿಸಲು ಅದು ಸಾಕಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. (ಮಿಲೆನ್ ಇವನೊವ್ ದವ್ರಾನ್ಸ್ಕಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).
ಪ್ರಸ್ತುತ ಭಾರತೀಯ ಜೈಲಿನಲ್ಲಿರುವ ವ್ಯಕ್ತಿಯೊಬ್ಬರು ತಮ್ಮನ್ನು ತ್ವರಿತವಾಗಿ ತಾಯ್ನಾಡಿಗೆ ಹಸ್ತಾಂತರಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಸೆಕ್ಷನ್ 5ರ ಅಡಿಯಲ್ಲಿ ವಿಚಾರಣೆಯಲ್ಲಿರುವ ವ್ಯಕ್ತಿಯನ್ನು ಹಸ್ತಾಂತರಿಸಲು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅನುಮತಿ ನೀಡಿದಾಗ ಆ ವ್ಯಕ್ತಿಯನ್ನು ತಕ್ಷಣ ಬಿಡುಗಡೆ ಮಾಡಬೇಕಾಗುತ್ತದೆ ಎಂಬುದು 1962ರ ಹಸ್ತಾಂತರ ಕಾಯಿದೆಯ ಸೆಕ್ಷನ್ 24ರಲ್ಲಿ ಅತ್ಯಂತ ಸ್ಪಷ್ಟವಾಗಿದೆ ಎಂದು ಕೂಡ ಅರ್ಜಿದಾರರು ವಾದಿಸಿದ್ದರು.
ಮತ್ತೊಂದೆಡೆ, ಕಾಯಿದೆಯ ಸೆಕ್ಷನ್ 31 (1) (ಡಿ) ಯನ್ನು ಆಧರಿಸಿ ಕೇಂದ್ರ ಸರ್ಕಾರ “ವ್ಯಕ್ತಿಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಬಿಡುಗಡೆ ಮಾಡದ ಹೊರತು ಅಂದರೆ ಖುಲಾಸೆಗೊಳ್ಳದೆ ಅಥವಾ ಶಿಕ್ಷಾವಧಿ ಮುಗಿಯದ ವಿನಾ ಬೇರೆ ಸಂದರ್ಭಗಳಲ್ಲಿ ಆ ವ್ಯಕ್ತಿಯನ್ನು ಬಿಡುಗಡೆ ಅಥವಾ ಹಸ್ತಾಂತರ ಮಾಡಲು ಅನುಮತಿ ನೀಡಲಾಗದು ಎಂಬ ವಾದ ಮುಂದಿಟ್ಟಿತು. ಅರ್ಜಿದಾರರು ಗೋವಾ ರಾಜ್ಯದಲ್ಲಿ ಮೂರು ಪ್ರಕರಣಗಳಲ್ಲಿ ಬಿಡುಗಡೆಯಾಗಿದ್ದರೂ ಕೂಡ ಅವುಗಳು ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದ ಅಪರಾಧಕ್ಕೆ ಸಂಬಂಧಿಸಿಲ್ಲ ಎಂದು ಕೇಂದ್ರ ವಿವರಿಸಿತು.
ಹಸ್ತಾಂತರ ಎಂಬುದು ಆಡಳಿತಾತ್ಮಕ ಮತ್ತು ನ್ಯಾಯಾಂಗ ಕಾರ್ಯವಾಗಿದ್ದರೂ ಆಡಳಿತಾತ್ಮಕ ಕ್ರಮಗಳಿಂದಾಗಿ ನ್ಯಾಯಾಂಗ ಕಾರ್ಯ ನುಜ್ಜುಗುಜ್ಜಾಗಿದೆ ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿದೆ. ಭಾರತ ಮತ್ತು ಬಲ್ಗೇರಿಯಾ ಗಣರಾಜ್ಯಗಳ ನಡುವಿನ ಹಸ್ತಾಂತರ ಒಪ್ಪಂದವನ್ನು ವಿಶ್ಲೇಷಿಸಿದಾಗ ಇಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ ಬಾಕಿ ಇದ್ದರೂ ಹಸ್ತಾಂತರ ಕೋರಿಕೆಯನ್ನು ಭಾರತ ಸರ್ಕಾರ ಪರಿಶೀಲಿಸಬೇಕಾಗುತ್ತದೆ ಎಂದು ಅದು ಹೇಳಿದೆ.
ಆದರೂ ಎರಡೂ ದೇಶದ ನಡುವಿನ ಒಪ್ಪಂದದ 11 (2) ನೇ ವಿಧಿಯಡಿ, ಹಸ್ತಾಂತರಕ್ಕೆ ಅವಕಾಶ ನೀಡಿದ ನಂತರ, ಭಾರತದಲ್ಲಿ ಕ್ರಿಮಿನಲ್ ಮೊಕದ್ದಮೆಗಳು ಪೂರ್ಣಗೊಳ್ಳುವವರೆಗೆ ಶರಣಾಗತಿಯನ್ನು ಮುಂದೂಡಬಹುದು, ಅಥವಾ ಶಿಕ್ಷೆ ಯಾವುದಾದರೂ ಇದ್ದರೆ ಅದನ್ನು ಪೂರ್ಣಗೊಳಿಸಬೇಕಾಗುತ್ತದೆ
ಪ್ರಸ್ತುತ ಪ್ರಕರಣದಲ್ಲಿ ಮನವಿ ಸಲ್ಲಿಸಿದ ದೇಶಕ್ಕೆ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಹಸ್ತಾಂತರಿಸುವುದು ಕೆಲ ಷರತ್ತುಗಳಿಗೆ ಒಳಪಟ್ಟಿದ್ದು ಭಾರತ ಸರ್ಕಾರ ಮತ್ತು ಬಲ್ಗೇರಿಯಾ ಗಣರಾಜ್ಯದ ನಡುವಿನ ಒಪ್ಪಂದಕ್ಕೆ ಅನುಗಣವಾಗಿರುತ್ತದೆ ಎಂದು ಎಂದು ಪೀಠ ತಿಳಿಸಿದೆ.
ಮೂರು ಎಫ್‌ಐಆರ್‌ಗಳಲ್ಲಿ ಅರ್ಜಿದಾರನ ವಿರುದ್ಧ ಹೊರಿಸಲಾಗಿರುವ ಆರೋಪಗಳು ತನಿಖೆಯ ಹಂತದಲ್ಲಿದ್ದು ಆತನನ್ನು ಖುಲಾಸೆಗೊಳಿಸಿಲ್ಲ ಅಥವಾ ಬಿಡುಗಡೆ ಮಾಡಿಲ್ಲ. ಹೀಗಾಗಿ ಅರ್ಜಿದಾರನನ್ನು ಹಸ್ತಾಂತರಿಸಲು ಅನುಮತಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.