ಸುದ್ದಿಗಳು

ಮತಾಂತರಕ್ಕೆ ಪ್ರಯತ್ನಿಸದ ಹೊರತು ಇಸ್ಲಾಂ ಧರ್ಮದ ಪ್ರಚಾರ ಅಪರಾಧವಲ್ಲ: ಹೈಕೋರ್ಟ್‌

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗ್ರಾಮೀಣ ಠಾಣೆಯಲ್ಲಿ ಮುಸ್ತಾಫಾ, ಅಲಿಸಾಬ್‌ ಮತ್ತು ಸುಲೇಮಾನ್‌ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್‌ ಧಾರವಾಡ ಪೀಠವು ವಜಾಗೊಳಿಸಿದೆ.

Bar & Bench

ಹಿಂದೂ ದೇವಾಲಯದಲ್ಲಿ ಇಸ್ಲಾಂನ ವಿಚಾರಗಳ ಕರಪತ್ರ ಹಂಚಿಕೆ ಮಾಡಿದ ಹಾಗೂ ಧಾರ್ಮಿಕ ನಂಬಿಕೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಮುಸ್ಲಿಮರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ವಜಾಗೊಳಿಸಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗ್ರಾಮೀಣ ಠಾಣೆಯಲ್ಲಿ ಮುಸ್ತಾಫಾ, ಅಲಿಸಾಬ್‌ ಮತ್ತು ಸುಲೇಮಾನ್‌ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಟಿ ವೆಂಕಟೇಶ್‌ ನಾಯ್ಕ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಮೂರನೇ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ಇದು ಕಾಯಿದೆ ಸೆಕ್ಷನ್‌ 4ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ದೂರುದಾರರಿಗೆ ಅಧಿಕಾರ ವ್ಯಾಪ್ತಿ ಇಲ್ಲವಾದ್ದರಿಂದ ಎಫ್‌ಐಆರ್‌ ಅಸಿಂಧುವಾಗಲಿದೆ. ಅರ್ಜಿದಾರರು ಯಾವುದೇ ವ್ಯಕ್ತಿಯನ್ನು ಇಸ್ಲಾಂಗೆ ಮತಾಂತರಗೊಳಿಸಲು ಅಥವಾ ಮತಾಂತರಗೊಳಿಸಿರುವ ಬಗ್ಗೆ ಯಾವುದೇ ಆರೋಪವಿಲ್ಲ. ಹೀಗಾಗಿ, ಎಫ್‌ಐಆರ್‌ ದಾಖಲಾಗಿರುವುದು ಮತ್ತು ಅದರ ಸಂಬಂಧ ಆರೋಪ ಪಟ್ಟಿ ಸಲ್ಲಿಕೆ ಮಾಡಿರುವುದಕ್ಕೆ ಯಾವುದೇ ಮಾನ್ಯತೆ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಆರೋಪಿಗಳ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 299, 351(2) ಮತ್ತು 3(5), ಸ್ವಾತಂತ್ರ್ಯ ಮತ್ತು ಧಾರ್ಮಿಕ ಹಕ್ಕಿನ ರಕ್ಷಣೆ ಕಾಯಿದೆ ಸೆಕ್ಷನ್‌ 5ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರರು ಯಾರನ್ನೂ ಇಸ್ಲಾಂಗೆ ಮತಾಂತರಗೊಳಿಸಲು ಪ್ರಯತ್ನಿಸದೇ ಇರುವುದರಿಂದ ಅವರು ಶಾಸನದ ಅನ್ವಯ ಯಾವುದೇ ಅಪರಾಧ ಎಸಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲ ಇಫ್ತೇಕರ್‌ ಶಾಹಪುರಿ ಮತ್ತು ಅನ್ವರ್‌ ಅಲಿ ನದಾಫ್‌ ಅವರು “ಅಲ್ಲಾಹ್ ಮತ್ತು ಪ್ರವಾದಿ ಮೊಹಮ್ಮದ್‌ ಅವರ ಸದ್ವಿಚಾರಗಳನ್ನು ಅರ್ಜಿದಾರರು ತಿಳಿಸಿದ್ದಾರೆ. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡುವ ಆರೋಪಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಹಕ್ಕಿನ ರಕ್ಷಣೆ ಕಾಯಿದೆ ಸೆಕ್ಷನ್‌ 5 ಅನ್ವಯಿಸುವುದಕ್ಕೆ ಅಗತ್ಯವಾದ ಅಂಶಗಳು ದೂರಿನಲ್ಲಿಲ್ಲ. ದೂರುದಾರರು ಮೂರನೇ ವ್ಯಕ್ತಿಯಾಗಿರುವುದರಿಂದ ಅವರ ದೂರು ಕಾನೂನುಬದ್ಧವಲ್ಲ” ಎಂದಿದ್ದರು.

ಪ್ರಕರಣದ ಹಿನ್ನೆಲೆ: ಬಾಗಲಕೋಟೆಯ ಜಮಖಂಡಿಯ ರಾಮತೀರ್ಥ ದೇವಾಲಯಕ್ಕೆ 04.05.2025ರ ಸಂಜೆ 4:30ಕ್ಕೆ ಅರ್ಜಿದಾರರು ತೆರಳಿ, ಇಸ್ಲಾಂ ಧರ್ಮದಲ್ಲಿನ ನಂಬಿಕೆಗಳ ಕುರಿತು ಅಲ್ಲಿನ ಭಕ್ತರಿಗೆ ಕರಪತ್ರ ಹಂಚುವ ಮುಲಕ ವಿವರಣೆ ನೀಡಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ತೆರಳಿದಾಗ ಅವರು ಹಿಂದೂ ಧರ್ಮವನ್ನು ಟೀಕಿಸಿ, ಆಕ್ಷೇಪಾರ್ಹವಾದ ಹೇಳಿಕೆ ನೀಡಿದ್ದರು ಎಂದು ದೂರಲಾಗಿತ್ತು. ಇಸ್ಲಾಂಗೆ ಮತಾಂತರಗೊಂಡರೆ ವಾಹನ, ದುಬೈನಲ್ಲಿ ಕೆಲಸದ ಆಮಿಷವೊಡ್ಡಿದ್ದರು ಎಂದು ಆರೋಪಿಸಲಾಗಿತ್ತು.

Mustafa & others Vs State of Karnataka.pdf
Preview