Supreme Court, Mother and Child
Supreme Court, Mother and Child 
ಸುದ್ದಿಗಳು

ಜನ್ಮ ನೀಡಿದ ತಂದೆ ಮರಣ ಹೊಂದಿದ್ದರೆ ಮಲ ತಂದೆಯ ಕುಲನಾಮದ ಹೆಸರು ಮಗುವಿಗೆ ಇಡಲು ತಾಯಿಗೆ ಹಕ್ಕಿದೆ: ಸುಪ್ರೀಂ ಕೋರ್ಟ್‌

Bar & Bench

ಮಗುವಿನ ಪಾಲಕನ ಸ್ಥಾನದಲ್ಲಿ ತಾಯಿ ಒಬ್ಬರೇ ಇದ್ದಾಗ ಮಗುವಿಗೆ ಕುಲನಾಮ/ಉಪನಾಮ ನೀಡುವ ಹಾಗೂ ಅದನ್ನು ದತ್ತು ನೀಡುವ ಹಕ್ಕನ್ನು ತಾಯಿ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಮಹತ್ವದ ಆದೇಶ ಮಾಡಿದೆ. ಅಲ್ಲದೇ, ಮಗುವಿನ ಕುಲನಾಮವಾಗಿ ಮಲ ತಂದೆಯ ಹೆಸರು ಇಟ್ಟಿದ್ದನ್ನು ಬದಲಿಸಿ ಜೈವಿಕ ತಂದೆಯ ಹೆಸರು ಇಡುವಂತೆ ಆದೇಶಿಸಿದ್ದ ಆಂಧ್ರ ಪ್ರದೇಶ ಹೈಕೋರ್ಟ್‌ ನಿರ್ದೇಶನವನ್ನು ಬದಿಗೆ ಸರಿಸಿದೆ.

ಮೊದಲ ಪತಿ ಸಾವನ್ನಪ್ಪಿದ ಬಳಿಕ ಮರು ಮದುವೆಯಾಗಿದ್ದ ಮಹಿಳೆಯು ಆಂಧ್ರ ಪ್ರದೇಶ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ದಿನೇಶ್‌ ಮಾಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಮಲ ತಂದೆಯ ಸ್ಥಾನದಲ್ಲಿ ಜೈವಿಕ ತಂದೆಯ ಹೆಸರು ಉಲ್ಲೇಖಿಸುವಂತೆ ಆದೇಶಿಸಿರುವ ಹೈಕೋರ್ಟ್‌ ಆದೇಶವು ತಿಳಿಗೇಡಿತನ ಮತ್ತು ಕ್ರೌರ್ಯದಿಂದ ಕೂಡಿದೆ ಎಂದು ಪೀಠ ಹೇಳಿದೆ. “ಮಗುವಿನ ಪಾಲಕ ಸ್ಥಾನದಲ್ಲಿ ಸ್ವಾಭಾವಿಕವಾಗಿ ತಾಯಿ ಒಬ್ಬರೇ ಇದ್ದಾಗ ಮಗುವಿಗೆ ಕುಲನಾಮ ನೀಡುವ ಹಕ್ಕನ್ನು ಹೊಂದಿರುತ್ತಾರೆ. ಮಗುವನ್ನು ದತ್ತು ನೀಡುವ ಹಕ್ಕನ್ನೂ ತಾಯಿ ಹೊಂದಿರುತ್ತಾರೆ” ಎಂದು ಪೀಠ ಹೇಳಿದೆ.

“ಮೇಲ್ಮನವಿದಾರೆಯ ಪತಿಯ ಹೆಸರನ್ನು ಮಲ ತಂದೆ ಎಂದು ಮಗುವಿನ ದಾಖಲೆಯಲ್ಲಿ ಉಲ್ಲೇಖಿಸುವಂತೆ ನಿರ್ದೇಶಿಸಿರುವ ಹೈಕೋರ್ಟ್‌ ಆದೇಶವು ಬಹುತೇಕ ತಿಳಿಗೇಡಿತನ ಮತ್ತು ಕ್ರೌರ್ಯದಿಂದ ಕೂಡಿದ್ದು, ಇದು ಮಗುವಿನ ಮಾನಸಿಕ ಆರೋಗ್ಯ ಮತ್ತು ಆತ್ಮಸ್ಥೈರ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಮಗು ತನ್ನ ಗುರುತನ್ನು ಕಂಡುಕೊಳ್ಳಲು ನಿಟ್ಟಿನಲ್ಲಿ ಹೆಸರು ಅತ್ಯಂತ ಮಹತ್ವ ಹೊಂದಿದೆ. ತನ್ನ ಕುಟುಂಬದಿಂದ ಹೊರತಾದ ಹೆಸರನ್ನು ಮಗುವಿಗೆ ಇಟ್ಟರೆ ಅದು ಸುಪ್ತವಾಗಿ ಮನಸ್ಸಿನ ಮೇಲೆ ಪರಿಣಾಮ ಬೀರಲಿದ್ದು , ಮಗುವನ್ನು ಅನಗತ್ಯ ಪ್ರಶ್ನೆಗಳಿಗೆ ಒಡ್ಡಿ, ಹೆತ್ತವರ ನಡುವಿನ ಸುಗಮ, ಸಹಜ ಸಂಬಂಧಕ್ಕೆ ಅಡ್ಡಿ ಉಂಟು ಮಾಡುತ್ತದೆ “ಎಂದು ಪೀಠ ಹೇಳಿದೆ.

ಪುತ್ರನ ಸಾವಿನ ನಂತರ ಸೊಸೆ ಮತ್ತೊಂದು ವಿವಾಹವಾದ ಹಿನ್ನೆಲೆಯಲ್ಲಿ ಪೋಷಕ ಕಾಯಿದೆ (ಗಾರ್ಡಿಯನ್ಸ್‌ ಮತ್ತು ವಾರ್ಡ್ಸ್‌ ಕಾಯಿದೆ) ಅನ್ವಯ ಮಗುವಿನ ಅಜ್ಜ-ಅಜ್ಜಿಯು 2008ರಲ್ಲಿ ಮೊಮ್ಮೊಗವನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕಾನೂನು ಹೊರಾಟ ನಡೆಸಿದ್ದರು. ಅಜ್ಜ-ಅಜ್ಜಿಯ ಕೋರಿಕೆಯನ್ನು ತಿರಸ್ಕರಿಸಿದ್ದ ವಿಚಾರಣಾಧೀನ ನ್ಯಾಯಾಲಯವು ತಾಯಿಯಿಂದ ಮಗುವನ್ನು ಪ್ರತ್ಯೇಕಿಸುವುದು ವಿವೇಚನಾಯುತ ನಿರ್ಧಾರವಲ್ಲ ಎಂದಿತ್ತು. ಆದರೆ, ಅಜ್ಜ-ಅಜ್ಜಿಗೆ ಮಗುವನ್ನು ಆಗಾಗ್ಗೆ ಭೇಟಿ ಮಾಡುವ ಹಕ್ಕು ನೀಡಿತ್ತು. ಇದನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್‌ ಅದರೊಟ್ಟಿಗೇ ಕೆಲ ಆಕ್ಷೇಪಿತ ನಿರ್ದೇಶನಗಳನ್ನೂ ನೀಡಿತ್ತು.

ಮೂರು ತಿಂಗಳ ಒಳಗೆ ತಾಯಿಯು ಮಗುವಿನ ಹೆಸರಿನ ಜೊತೆಗೆ ಮಲ ತಂದೆಯ ಉಪನಾಮದ ಬದಲಿಗೆ ಜೈವಿಕ ತಂದೆಯ ಉಪನಾಮ ಸೇರಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಎಲ್ಲೆಲ್ಲಿ ದಾಖಲೆಯಲ್ಲಿ ಮಗುವಿನ ಅಸಲಿ ತಂದೆಯ ಹೆಸರು ಸೇರಿಸಲು ಅವಕಾಶವಿದೆಯೋ ಅಲ್ಲೆಲ್ಲಾ ಅವರ ಹೆಸರು ಸೇರ್ಪಡೆ ಮಾಡಬೇಕು. ಎಲ್ಲಿ ಹೆಸರು ಬದಲಿಸಲಾಗುವುದಿಲ್ಲವೋ ಅಲ್ಲಿ ಮಲ ತಂದೆ ಎಂದು ಮಾಡಬೇಕು ಎಂದು ಹೇಳಿತ್ತು.

ಈ ಹೆಚ್ಚುವರಿ ಷರತ್ತುಗಳನ್ನು ಸೇರಿಸುವಂತೆ ಮಗುವಿನ ಅಜ್ಜ-ಅಜ್ಜಿ ಕೋರಿರಲಿಲ್ಲ. ಆದರೆ, ಇದನ್ನು ಹೈಕೋರ್ಟ್‌ ಆದೇಶದಲ್ಲಿ ಹೆಚ್ಚುವರಿಯಾಗಿ ಸೇರಿಸಿದೆ ಎಂದು ತಾಯಿಯು ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.