Karnataka High Court
Karnataka High Court 
ಸುದ್ದಿಗಳು

ಸಂಡೂರಿನ ಸ್ವಾಮಿಮಲೈ ಬೆಟ್ಟದಲ್ಲಿ ಗಣಿಗಾರಿಕೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

Bar & Bench

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಪುರಾತನ ಮತ್ತು ಸಂರಕ್ಷಿತ ಸ್ಮಾರಕವಾಗಿರುವ ಕುಮಾರಸ್ವಾಮಿ ದೇವಸ್ಥಾನ ಸುತ್ತಲಿನ ಸ್ವಾಮಿಮಲೈ ಬೆಟ್ಟದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಣಿಗಾರಿಕೆ ನಿರ್ಬಂಧಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಸಂಡೂರಿನ ಶ್ರೀಶೈಲ ಆಳದಹಳ್ಳಿ ಸೇರಿದಂತೆ ಐವರು ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ವಾದ ಆಲಿಸಿದ ಪೀಠವು ಕೇಂದ್ರ ಸಂಸ್ಕೃತಿ ಸಚಿವಾಲಯ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ಭಾರತೀಯ ಸರ್ವೇಕ್ಷಣಾ ಇಲಾಖೆ ಹಾಗೂ ಐದು ಗಣಿ ಕಂಪನಿಗಳಿಗೆ ಸೇರಿದಂತೆ ಒಟ್ಟು 17 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ನಾಲ್ಕು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ.

ಏಳು ಮತ್ತು ಎಂಟನೇ ಶತಮಾನದ ಬಾದಾಮಿ ಚಾಲುಕ್ಯರ ಅವಧಿಯಲ್ಲಿ ಕುಮಾರಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತಲೂ ಜೀವ ವೈವಿಧ್ಯ ಮತ್ತು ಔಷಧೀಯ ಗುಣವುಳ್ಳ ಸಸ್ಯರಾಶಿಯನ್ನು ಹೊಂದಿರುವ ಸ್ವಾಮಿಮಲೈ ಸಂರಕ್ಷಿತ ಅರಣ್ಯವಾಗಿದೆ. ಸ್ವಾಮಿಮಲೈ ಬೆಟ್ಟದ 2.5 ಎಕರೆ ಜಾಗದಲ್ಲಿ ಕುಮಾರಸ್ವಾಮಿ ದೇವಸ್ಥಾನವನ್ನು ರಾಷ್ಟ್ರೀಯ ಸಂರಕ್ಷಿತ ಮತ್ತು ಪುರಾತನ ಸ್ಮಾರಕವಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ದಕ್ಷಿಣ ಪ್ರಸ್ಥಭೂಮಿಯ ಪಶ್ಚಿಮಘಟ್ಟವೆಂದೇ ಸ್ವಾಮಿಮಲೈ ಬೆಟ್ಟವು ಖ್ಯಾತಿ ಪಡೆದಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಸ್ವಾಮಿಮಲೈ ಕಾಡಿನಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಸದ್ಯ ದೇವಸ್ಥಾನದ ಬಾಗಿಲ ಸಮೀಪದವರೆಗೂ ಗಣಿಗಾರಿಕೆ ನಡೆಸಲಾಗಿದೆ. ನಿರಂತರ ಗಣಿ ಚಟುವಟಿಕೆಯಿಂದಾಗಿ ದೇವಸ್ಥಾನದ ರಚನೆಗಳಿಗೆ ಗಂಭೀರ ಸ್ವರೂಪದ ಹಾನಿ ಉಂಟಾಗುತ್ತಿದೆ. ದೇವಸ್ಥಾನದ ಹಲವು ಭಾಗಗಳು ದುಸ್ಥಿತಿಗೆ ತಲುಪಿವೆ. ಗಣಿ ಸ್ಫೋಟದಿಂದ ದೇವಸ್ಥಾನದ ಕಲ್ಲಿನ ಕಂಬಗಳಲ್ಲಿ ಬಿರುಕು ಮೂಡಿದ್ದು, ಗೋಪುರ ವಾಲಿದೆ. ಸ್ಥಳೀಯ ಗ್ರಾಮಗಳ ಕುಡಿಯುವ ನೀರಿನ ಮೂಲ ಕಲುಷಿತವಾಗಿದೆ. ಕಬ್ಬಿಣದ ಅದಿರು ಕಣಗಳಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ. ಗಣಿ ದೂಳಿನಿಂದ ದೇವಸ್ಥಾನ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಸ್ವಾಮಿಮಲೈ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕು. ದೇವಸ್ಥಾನವನ್ನು ಸಂರಕ್ಷಣೆ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.