ಸುದ್ದಿಗಳು

ಗಣಿ ಗುತ್ತಿಗೆ ನವೀಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದ ಪಿಐಎಲ್‌ ವಜಾ

ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು. ಗಣಿ ಗುತ್ತಿಗೆಗಳ ಕಾನೂನುಬಾಹಿರ ನವೀಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

Bar & Bench

ಅಕ್ರಮವಾಗಿ ಗಣಿ ಗುತ್ತಿಗೆ ಪರವಾನಗಿಗಳನ್ನು ನೀಡಿದ ಹಾಗೂ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನವೀಕರಣ ಮಾಡಿರುವ ಆರೋಪದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ಬೆಂಗಳೂರಿನ ಉದ್ಯಮಿ ಎಂ ಪಿ ವೇಣುಗೋಪಾಲ್ ಸಲ್ಲಿಸಿದ್ದ ಸಾರ್ವಜನಿಕ  ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕಲಾಪ ಆರಂಭಗೊಂಡ ಮೇಲೆ ವಿಚಾರಣೆಗೆ ಅರ್ಜಿಯ ಸರತಿ ಬಂದಾಗ ಕೋರ್ಟ್ ಅಧಿಕಾರಿಗಳು ಪ್ರಕರಣವನ್ನು ಕರೆದರು. ಎರಡೂ ಬಾರಿ ಕೋರ್ಟ್ ಅಧಿಕಾರಿ ಪ್ರಕರಣವನ್ನು ಕರೆದರೂ, ಅರ್ಜಿದಾರರ ಪರ ವಕೀಲರು ಹಾಜರಾಗಿಲ್ಲ. ಇದಕ್ಕಾಗಿ, ಕಾನೂನು ಪ್ರಕ್ರಿಯೆ ಪಾಲಿಸದ ಆಧಾರದಲ್ಲಿ ಅರ್ಜಿಯನ್ನು ವಜಾಗೊಳಿಸಿ ಪೀಠ ಆದೇಶಿಸಿತು. ಅರ್ಜಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿಂದಿನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಕೆಲವು ಖಾಸಗಿ ಗಣಿ ಕಂಪೆನಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು. ಗಣಿ ಗುತ್ತಿಗೆಗಳ ಕಾನೂನು ಬಾಹಿರ ನವೀಕರಣ ಸಂಬಂಧ ಸ್ವತಂತ್ರ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು. ಈ ವಿಚಾರವಾಗಿ ವರದಿ ನೀಡುವಂತೆ ಲೋಕಾಯುಕ್ತಕ್ಕೆ ಸೂಚಿಸಬೇಕು. ರಾಮಗಡ ಮಿನಿರಲ್ ಅಂಡ್‌ ಮೈನಿಂಗ್ ಪ್ರೈ. ಲಿಮಿಟೆಡ್, ವೀರಭದ್ರಪ್ಪ ಸಂಗಪ್ಪ ಅಂಡ್‌ ಕಂಪೆನಿಗಳಿಗೆ ನೀಡಲಾಗಿರುವ ಗಣಿ ಗುತ್ತಿಗೆ ರದ್ದುಪಡಿಸಬೇಕು. ಎಲ್ಲಾ ಗಣಿ ಗುತ್ತಿಗೆ ಪರವಾನಿಗೆಗಳನ್ನು ಕಾನೂನು ಬಾಹಿರ ಎಂದು ಘೋಷಿಸಬೇಕು. ಇದರಿಂದ ಆಗಿರುವ ಆರ್ಥಿಕ ನಷ್ಟವನ್ನು ಅಕ್ರಮ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.