Karnataka High Court 
ಸುದ್ದಿಗಳು

ವೇಶ್ಯಾವಾಟಿಕೆಗೆ ದೂಡಿದ್ದ ಅಪ್ರಾಪ್ತೆಯ ಶೋಷಣೆ; ಆರೋಪಿಯ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

ವೇಶ್ಯವಾಟಿಕೆ ಕೇಂದ್ರಕ್ಕೆ ತಾನು ಗ್ರಾಹಕನಾಗಿದ್ದರಿಂದ ಮಾನವ ಕಳ್ಳಸಾಗಣೆ ಪ್ರಕರಣ, ಪೋಕ್ಸೋ ಅಥವಾ ಅತ್ಯಾಚಾರ ಪ್ರಕರಣ ದಾಖಲಿಸಲಾಗದು ಎಂಬುದು ಆರೋಪಿಯ ವಾದವಾಗಿತ್ತು.

Bar & Bench

ವೇಶ್ಯಾವಾಟಿಕೆಗೆ ಒತ್ತಾಯವಾಗಿ ದೂಡಲಾಗಿದ್ದ ಅಪ್ರಾಪ್ತೆಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಪೋಕ್ಸೋ, ಅತ್ಯಾಚಾರ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ವೇಶ್ಯವಾಟಿಕೆ ಕೇಂದ್ರಕ್ಕೆ ತಾನು ಗ್ರಾಹಕನಾಗಿದ್ದರಿಂದ ಮಾನವ ಕಳ್ಳಸಾಗಣೆ ಪ್ರಕರಣ, ಪೋಕ್ಸೋ ಅಥವಾ ಅತ್ಯಾಚಾರ ಪ್ರಕರಣ ದಾಖಲಿಸಲಾಗದು ಎಂಬ ಆರೋಪಿಯ ವಾದ ತಳ್ಳಿಹಾಕಿರುವ ಹೈಕೋರ್ಟ್, ಸಂತ್ರಸ್ತೆಯು ಅಪ್ತಾಪ್ತೆಯಾಗಿದ್ದಾರೆ. ಆಕೆಯೊಂದಿಗೆ ಬಲವಂತವಾಗಿ ಸಂಭೋಗ ನಡೆಸಿ, ಅದರ ದೃಶ್ಯಗಳನ್ನು ದಾಖಲಿಸಿಕೊಂಡು ಬೆದರಿಕೆ ಹಾಕಿರುವುದರಿಂದ ಆರೋಪಿಯನ್ನು ಗ್ರಾಹಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತದರ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ಕೇರಳದ ಕಾಸರಗೋಡಿನ ಮೊಹಮ್ಮದ್ ಷರೀಫ್ (45) ಎಂಬಾತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಅರ್ಜಿದಾರ ಸೇರಿದಂತೆ ಇತರ ಆರೋಪಿಗಳು ಅಪ್ರಾಪ್ತೆ ಜೊತೆಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಘೋರ ಪಾತಕ ಎಸಗಿದ್ದಾರೆ. ಬೇರೆ ಬೇರೆ ಆರೋಪಿಗಳು ಒಂದೇ ದಿನ ಪ್ರತ್ಯೇಕವಾಗಿ ಅಪರಾಧ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ಒಬ್ಬಳೇ ಎಂಬ ಮಾತ್ರಕ್ಕೆ ಒಂದೇ ಎಫ್‌ಐಆರ್ ದಾಖಲಿಸಬೇಕು. ಒಂದೇ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಸೇರಿಸಬೇಕೆಂಬ ವಾದವನ್ನು ಒಪ್ಪಲಾಗದು ಎಂದು ಹೈಕೋರ್ಟ್ ಆದೇಶದಲ್ಲಿ ನುಡಿದಿದೆ.

ಅಲ್ಲದೆ, ಸಂತ್ರಸ್ತೆಗೆ 18 ವರ್ಷ ತಂಬಿಲ್ಲ. 17 ವರ್ಷದ ಅಪ್ರಾಪ್ತೆ ಖುದ್ದಾಗಿ ದಾಖಲಿಸಿದ ದೂರು ಇದಾಗಿದೆ. ವೇಶ್ಯಾವಾಟಿಕೆ ಮೇಲೆ ಪೊಲೀಸರು ನಡೆಸಿದ ದಾಳಿ ವೇಳೆ ಅರ್ಜಿದಾರ ಬಂಧನಕ್ಕೆ ಒಳಗಾಗಿರಲಿಲ್ಲ. ಹಾಗಾಗಿ, ಗ್ರಾಹಕ ಎಂದೇಳಿ ಆತನ ವಿರುದ್ಧದ ಪ್ರಕರಣ ರದ್ದು ಮಾಡಲಾಗದು. ಸಂಭೋಗದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ಇತರೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿರುವುದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯೂ ಅರ್ಜಿದಾರ ಅಪರಾಧ ಕೃತ್ಯ ಎಸಗಿದ್ದಾನೆ. ಎಫ್‌ಐಆರ್ ಉಲ್ಲೇಖಿಸಿರುವ ಆರೋಪಗಳನ್ನು ಪುಷ್ಟೀಕರಿಸುವ ಅಂಶಗಳು ಮೇಲ್ನೋಟಕ್ಕೆ ಕಂಡುಬರುವುದರಿಂದ ಅರ್ಜಿ ಪುರಸ್ಕರಿಸಲಾಗದು ಎಂದು ನ್ಯಾಯಪೀಠ ತಿಳಿಸಿದೆ.