Chief Justice SV Gangapurwala and Justice PD Audikesavalu 
ಸುದ್ದಿಗಳು

ಮೀಸಲು ಸೀಟು ಕಾಯ್ದಿರಿಸುವಂತೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಒತ್ತಾಯಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

ಒಮ್ಮೆ ಶಿಕ್ಷಣ ಸಂಸ್ಥೆಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದರೆ, ಅದನ್ನು ರಾಜ್ಯ ಸರ್ಕಾರದ ಇಚ್ಛೆಯಂತೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

Bar & Bench

ಸಾಮಾಜಿಕ ಮೀಸಲಾತಿ, ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು (ಎಸ್‌ಸಿ/ಎಸ್‌ಟಿ) ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಅಭ್ಯರ್ಥಿಗಳಿಗೆ ಮೀಸಲಾತಿ ಸೀಟುಗಳನ್ನು ನಿಗದಿಪಡಿಸುವಂತೆ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರಗಳು ಒತ್ತಾಯಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ರಾಜ್ಯ ಸರ್ಕಾರಗಳಿಂದ ನೆರವು ಪಡೆದರೂ, ಸಾಮಾಜಿಕ ಮೀಸಲಾತಿಗಾಗಿ ಇರುವ ಸಾಂವಿಧಾನಿಕ ನಿಬಂಧನೆಗಳನ್ನು ಪಾಲಿಸುವ ಅಗತ್ಯವಿಲ್ಲ ಎಂದು ಸೆಪ್ಟೆಂಬರ್ 29ರಂದು ನೀಡಿದ ತೀರ್ಪಿನಲ್ಲಿ, ಮುಖ್ಯ ನ್ಯಾಯಮೂರ್ತಿ ಎಸ್‌ ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವಲು ಅವರಿದ್ದ ಪೀಠ ಹೇಳಿದೆ.

ಸಂವಿಧಾನದ 15(5) ವಿಧಿಯು ಜಾತಿ ಮತ್ತು ಸಾಮಾಜಿಕ ಮೀಸಲಾತಿ ವ್ಯಾಪ್ತಿಯಿಂದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ನೀಡುತ್ತದೆ ಎಂದು ಪೀಠ ಹೇಳಿದೆ.

ಪ್ರಮತಿ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಹಾಗೂ ಅಶೋಕ್ ಕುಮಾರ್ ಠಾಕೂರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪುಗಳನ್ನು ಪೀಠ ಉಲ್ಲೇಖಿಸಿದೆ. ಈ ತೀರ್ಪುಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆಯು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಮತ್ತು15(5)ನೇ ವಿಧಿಯು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಪ್ರತ್ಯೇಕ ವರ್ಗವಾಗಿರುವುದರಿಂದ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು ತಿಳಿಸಲಾಗಿತ್ತು.

"ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಜಾತಿ ಮೀಸಲಾತಿ ಅಥವಾ ಮೀಸಲಾತಿಯ ಪರಿಕಲ್ಪನೆಯು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲು ಯಾವುದೇ ಹಿಂಜರಿಕೆಯಿಲ್ಲ" ಎಂದು ಹೈಕೋರ್ಟ್ ತಿಳಿಸಿದೆ.

ಸಂಬಂಧಿತವಾಗಿ, ಒಮ್ಮೆ ಶಿಕ್ಷಣ ಸಂಸ್ಥೆಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದರೆ, ಅದನ್ನು ರಾಜ್ಯ ಸರ್ಕಾರದ ತನ್ನಿಚ್ಛೆಯಂತೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ನುಡಿದಿದೆ.

ನ್ಯಾಯಮೂರ್ತಿ ಬಶೀರ್ ಅಹ್ಮದ್ ಸಯೀದ್ ಮಹಿಳಾ ಕಾಲೇಜು ಅಲ್ಪಸಂಖ್ಯಾತ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.