Ex-BJP MLC Veeraiah 
ಸುದ್ದಿಗಳು

ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಹಗರಣ: ಮಾಜಿ ಎಂಎಲ್‌ಸಿ ವೀರಯ್ಯ ನ್ಯಾಯಾಂಗ ಬಂಧನಕ್ಕೆ

Bar & Bench

ಕರ್ನಾಟಕ ಸರ್ಕಾರದ ಉದ್ದಿಮೆಯಾದ ಡಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿನ (ಡಿಡಿಯುಟಿಟಿಎಲ್‌) ₹47 ಕೋಟಿ ಹಗರಣದಲ್ಲಿ ಆರೋಪಿಯಾಗಿರುವ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ವೀರಯ್ಯ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಂಗಳವಾರ ಜುಲೈ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ವೀರಯ್ಯ ಅವರ ಸಿಐಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶ ಕೆ ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ವೀರಯ್ಯ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.

2021-23ರ ಅವಧಿಯಲ್ಲಿ ಡಿಡಿಯುಟಿಟಿಎಲ್‌ ಹಣಕಾಸು ದುರ್ಬಳಕೆ ಹಗರಣ ನಡೆದಿದ್ದು, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಉಪನಿರ್ದೇಶಕ ಎಸ್‌ ಶಂಕರಪ್ಪ ಅವರನ್ನು ಮೊದಲಿಗೆ ಬಂಧಿಸಲಾಗಿತ್ತು. ಶಂಕರಪ್ಪ ಅವರು ಆಗ ಡಿಡಿಯುಟಿಟಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇದರ ಬೆನ್ನಿಗೇ ಜುಲೈ 12ರಂದು ಡಿಡಿಯುಟಿಟಿಎಲ್‌ನ ಮಾಜಿ ಅಧ್ಯಕ್ಷ ವೀರಯ್ಯ ಅವರನ್ನು ಸಿಐಡಿ ಬಂಧಿಸಿತ್ತು. ನಿಯಮಿತದ ನಿಯಮಾವಳಿಗಳಲ್ಲಿ ತುಂಡು ಗುತ್ತಿಗೆಗೆ ಅನುಮತಿ ಇಲ್ಲದೆ ಹೋದರೂ ₹2 ಕೋಟಿ ಮೌಲ್ಯದ ಕೆಲಸಗಳನ್ನು ಟೆಂಡರ್‌ ಕರೆಯದೇ ಗುತ್ತಿಗೆ ನೀಡಬಹುದು ಎನ್ನುವ ರೀತಿಯಲ್ಲಿ ನಿಯಮಿತದ ದಾಖಲೆಗಳನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೂ ಪೂರ್ಣ ಹಣ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿತ್ತು.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆ ಅಡಿ ಸರ್ಕಾರದ ಯಾವುದೇ ನಿಗಮವು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಗುತ್ತಿಗೆ ಕೆಲಸವನ್ನು ಟೆಂಡರ್‌ ಮೂಲಕ ನಡೆಸಬೇಕು ಎಂದಿದೆ. ಇದಕ್ಕೆ ವಿರುದ್ಧವಾಗಿ ಗುತ್ತಿಗೆ ನೀಡಲಾಗಿದೆ ಎಂಬುದು ಆರೋಪವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು 765 ಕಡತಗಳನ್ನು ಜಪ್ತಿ ಮಾಡಿದ್ದು, 380 ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ 450 ಪುಟಗಳ ದತ್ತಾಂಶವನ್ನು ವಿಶ್ಲೇಷಿಸಿದೆ ಎನ್ನಲಾಗಿದೆ. ವೀರಯ್ಯ ಅವರು 2008ರಿಂದ 2018ರವರೆಗೆ ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದರು.

ಡಿಡಿಯುಟಿಟಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಸಿ ಎನ್‌ ಶಿವಪ್ರಕಾಶ್‌ ಅವರು ಕಡತಗಳನ್ನು ಪರಿಶೀಲಿಸಿದಾಗ ಹಗರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಠಾಣೆಗೆ ದೂರು ನೀಡಿದ್ದರು. ಇದರ ಭಾಗವಾಗಿ ಐಪಿಸಿ ಸೆಕ್ಷನ್‌ಗಳಾದ 120ಬಿ (ಕ್ರಿಮಿನಲ್‌ ಪಿತೂರಿ), 409 (ಸಾರ್ವಜನಿಕ ಅಧಿಕಾರಿಯಿಂದ ನಂಬಿಕೆ ದ್ರೋಹ), 420 (ವಂಚನೆ), 465 (forgery) ಮತ್ತು 468 (ವಂಚಿಸುವ ದೃಷ್ಟಿಯಿಂದ ನಕಲಿ ಕೃತ್ಯ) ಅಡಿ ಪ್ರಕರಣ ದಾಖಲಾಗಿತ್ತು. ಆನಂತರ ಪ್ರಕರಣವನ್ನು ಸರ್ಕಾರವು ಸಿಐಡಿಗೆ ವರ್ಗಾಯಿಸಿತ್ತು.