Judge K M Radhakrishna 
ಸುದ್ದಿಗಳು

ಆರು ಚಿನ್ನದ ಪದಕಗಳ ದುರ್ಬಳಕೆ: ಕನ್ನಡ ಸಂಸ್ಕೃತಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ

Siddesh M S

ಕನ್ನಡ ರಾಜ್ಯೋತ್ಸವದ ಅಂಗವಾಗಿ ಅರ್ಹರಿಗೆ ನೀಡುವ ಸಲುವಾಗಿ ತರಿಸಲಾಗಿದ್ದ 25 ಚಿನ್ನದ ಪದಕಗಳ (22 ಕ್ಯಾರೆಟ್‌) ಪೈಕಿ ಆರು ಪದಕಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪದ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ನಾಲ್ವರು ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಈಚೆಗೆ ರದ್ದುಪಡಿಸಿದೆ.

ಕನ್ನಡ ಸಂಸ್ಕೃತಿ ಇಲಾಖೆಯ ಬಿ ಎಸ್‌ ಶಿವಪ್ರಕಾಶ್‌ (ಪ್ರಥಮ ದರ್ಜೆ ಸಹಾಯಕ), ನಿವೃತ್ತ ಆಯುಕ್ತ ಎಂ ಪಿ ಬಳಿಗಾರ್‌, ಅಂದಿನ ಜಂಟಿ ನಿರ್ದೇಶಕ ಕೆ ಟಿ ಚಿಕ್ಕಣ್ಣ ಮತ್ತು ರಂಗಾಯಣದ ಹಾಲಿ ನಿರ್ದೇಶಕ ಎಸ್‌ ಐ ಭಾವಿಕಟ್ಟಿ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎಂ ರಾಧಾಕೃಷ್ಣ ಅವರು ಖುಲಾಸೆಗೊಳಿಸಿದ್ದಾರೆ.

ಆರೋಪಿಗಳ ವಿರುದ್ಧದ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 13(1)(ಸಿ), 13(1)(ಡಿ) ಜೊತೆಗೆ 13(2) ಅಡಿ ಪ್ರಕರಣ ರದ್ದುಪಡಿಸಲಾಗಿದೆ. ತನಿಖೆಗಾಗಿ ಪಡೆಯಲಾಗಿದ್ದ‌ 19 ಚಿನ್ನದ ಪದಕ ಹಾಗೂ 188 ಕಡತಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮರಳಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.

ತನಿಖಾಧಿಕಾರಿಯು ಸ್ವೇಚ್ಛೆಯಿಂದ ನಡೆದುಕೊಂಡಿದ್ದು, ನಿಯಮಗಳಿಗೆ ವಿರುದ್ಧವಾಗಿ ವಾಸ್ತವಿಕ ಅಂಶಗಳನ್ನು ಪರಿಗಣಿಸದೇ ಆಧಾರರಹಿತ ಆರೋಪಗಳನ್ನು ಒಳಗೊಂಡ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಿಂದ 188 ಕಡತ ಜಪ್ತಿ ಮಾಡುವ ಸಂಕಟವನ್ನು ತನಿಖಾಧಿಕಾರಿಯು ಅನಗತ್ಯವಾಗಿ ತೆಗೆದುಕೊಂಡಿದ್ದಾರೆ ಎಂದು ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.

ಆಯುಕ್ತರ ಕಚೇರಿಯಲ್ಲಿ 25 ಚಿನ್ನದ ಪದಕಗಳಿದ್ದು, ಆರೋಪಿಗಳು ಆರು ಚಿನ್ನದ ಪದಕಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ತಮ್ಮ ಆರೋಪವನ್ನು ಸಮರ್ಥಿಸಿಲ್ಲ. ತನಿಖಾಧಿಕಾರಿಯ ಈ ರೀತಿಯ ನಡೆ ಮತ್ತು ಕಾನೂನುಬಾಹಿರ ಕೃತ್ಯದಿಂದ ಸಾಮಾನ್ಯ ಜನರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಹೋಗಲಿದೆ. ಇದರಿಂದ ಮುಗ್ಧರು ಸಂತ್ರಸ್ತರಾಗುವುದಲ್ಲದೇ ಸಕಾರಣವಿಲ್ಲದೇ ತಮ್ಮ ಅಮೂಲ್ಯವಾದ ಸಮಯವನ್ನು ಅವರು ನ್ಯಾಯಾಲಯದಲ್ಲಿ ಕಳೆಯುವಂತೆ ಮಾಡಲಾಗುತ್ತಿದೆ. ಇದು ನಿಜಕ್ಕೂ ಉತ್ತಮ ಸಂದೇಶವಲ್ಲ. ದುರದೃಷ್ಟಕರ ಎಂದು ನ್ಯಾಯಾಲಯ ಹೇಳಿದೆ.

ತನಿಖಾಧಿಕಾರಿಗಳು ಶ್ರಮವಹಿಸಿ ಅಂತಿಮ ವರದಿ ಸಿದ್ಧಪಡಿಸುವುದಕ್ಕೆ ಬದಲಾಗಿ ಸಹಾಯಕರನ್ನು ಅದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವೈಯಕ್ತಿಕವಾಗಿ ದಾಖಲೆಗಳನ್ನು ಪರಿಶೀಲಿಸುವುದನ್ನು ಬಿಟ್ಟು ನಿಯಮದ ಬಗ್ಗೆ ಅರಿವಿಲ್ಲದ ಸಹಾಯಕರಿಗೆ ಅದರ ಜವಾಬ್ದಾರಿ ನೀಡುತ್ತಾರೆ. ಅಂತಿಮ ವರದಿ ಸಲ್ಲಿಸುವ ಅಧಿಕಾರಿಗೆ ಬದ್ಧತೆ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಅಂತಿಮ ವರದಿಗೆ ಸಹಿ ಹಾಕಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣದ ಸಂಖ್ಯೆ ಪಡೆಯುವ ಮೂಲಕ ಕೈ ತೊಳೆದುಕೊಳ್ಳುತ್ತಾರೆ. ಸಿಆರ್‌ಪಿಸಿಯಲ್ಲಿ ತನಿಖೆ ಪೂರ್ಣಗೊಳಿಸುವುದಕ್ಕೆ ವಿಧಿಸಲಾಗಿರುವ ಕಟ್ಟುಪಾಡಿನ ಬಗ್ಗೆಯೂ ತನಿಖಾಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ಇದರಿಂದ ದಶಕಗಳಾದರೂ ಪ್ರಕರಣಗಳು ನ್ಯಾಯಾಲಯದಲ್ಲೇ ಬಾಕಿ ಉಳಿಯುತ್ತಿವೆ.

ದಾವೆದಾರರು ತಮ್ಮ ಅತ್ಯಮೂಲ್ಯ ಸಮಯ, ಹಣ, ಆರೋಗ್ಯ ಇತ್ಯಾದಿಯನ್ನು ನ್ಯಾಯಾಲಯದಲ್ಲಿ ಕಳೆಯುವಂತಾಗಿದೆ. ದಾವೆದಾರರನ್ನು ಹೇಗೆ ನಗಣ್ಯವಾಗಿ ಪರಿಗಣಿಸಲಾಗುತ್ತದೆ ಎಂಬುದಕ್ಕೆ 2014ರಿಂದ ಇಲ್ಲಿಯವರೆಗೆ ಬಾಕಿ ಉಳಿದಿರುವ ಎಫ್‌ಐಆರ್‌ ಉದಾಹರಣೆಯಾಗಿದೆ. ತಡವಾಗಿ ಆರೋಪ ಪಟ್ಟಿ ಸಲ್ಲಿಸುವುದು ಗಂಭೀರ ಸಮಸ್ಯೆಯಾಗಿದ್ದು, ಕಾರ್ಯವಿಧಾನದಲ್ಲಿ ಅಕ್ರಮ, ಸಾಕ್ಷಿಗಳಿಗೆ ಅಡ್ಡಿಯಾಗಲಿದೆ. ಇದರಿಂದ ನಿಜವಾದ ತಪ್ಪಿತಸ್ಥರು ಕ್ರಿಮಿನಲ್‌ ಹೊಣೆಗಾರಿಕೆಯಿಂದ ಬಚಾವಾಗುತ್ತಾರೆ. ಮೇಲಧಿಕಾರಿಗಳಿಗೆ ಇಂಥ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ಇದು ಸರಿಯಾದ ಸಮಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆರೋಪ ಪಟ್ಟಿಗೆ ಮುದ್ರೆ ಒತ್ತುವುದಕ್ಕೂ ಮುನ್ನ ಸಕ್ಷಮ ಪ್ರಾಧಿಕಾರಗಳು ಗಂಭೀರವಾಗಿ ಅವುಗಳನ್ನು ಪರಿಶೀಲಿಸಿದರೆ ಇಂಥ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ. ಇದರಿಂದ ಮುಗ್ಧರ ವಿರುದ್ದ ಅನಗತ್ಯ ಆರೋಪ ಮಾಡುವುದು ಮತ್ತು ಅವರು ಮುಜುಗರ ಅನುಭವಿಸುವುದು ತಪ್ಪಲಿದೆ. ಪ್ರಕರಣ ಇತ್ಯರ್ಥಪಡಿಸಲು ನ್ಯಾಯಾಲಯಗಳ ಮೇಲಿನ ಹೊರೆ ಕಡಿಮೆಯಾಗಿ, ಮೌಲ್ಯಯುತವಾದ ಸಮಯ ಉಳಿಯಲಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿವರ: ಆರೋಪಿಗಳಿಗೆ 25 ಚಿನ್ನದ ಪದಕಗಳ ಹೊಣೆಗಾರಿಕೆ ನೀಡಲಾಗಿತ್ತು. ತಮ್ಮ ಅಧಿಕಾರವಧಿಯಲ್ಲಿ ಸ್ಥಾನ ದುರ್ಬಳಕೆ ಮಾಡಿಕೊಂಡು 3,12,000 ರೂಪಾಯಿ ಮೌಲ್ಯದ 6 ಪದಕಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಅವರ ವಿರುದ್ಧ ಆರೋಪಿಸಲಾಗಿತ್ತು

Karnataka Lokayukta Vs B S Shivaprakash.pdf
Preview