Karnataka High Court
Karnataka High Court 
ಸುದ್ದಿಗಳು

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಣ ದುರ್ಬಳಕೆ ಪ್ರಕರಣ: ಆದೇಶ ಪಾಲನೆಯ ವರದಿ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

Bar & Bench

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನ್ಯಾಯಾಲಯ ನೀಡಿರುವ ಆದೇಶಗಳ ಪಾಲನೆ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಅರ್ಜಿದಾರರಿಗೆ ಮಂಗಳವಾರ ನಿರ್ದೇಶಿಸಿದೆ.

ಬೆಂಗಳೂರಿನ ಬಸವನಗುಡಿಯ ಕೆ ಆರ್ ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು “ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮೇಲಿಂದ ಮೇಲೆ ಹಲವು ಆದೇಶಗಳನ್ನು ನೀಡಿದೆ. ಅವುಗಳಲ್ಲಿ ಯಾವೆಲ್ಲಾ ಆದೇಶ ಪಾಲಿಸಲಾಗಿದೆ. ಯಾವ ಆದೇಶ ಪಾಲಿಸಲಾಗಿಲ್ಲ ಎಂಬ ಬಗ್ಗೆ ವರದಿ ಸಲ್ಲಿಸಲಾಗುವುದು. ಇದಕ್ಕೆ ಎರಡು ವಾರ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಕೀಲರು “ಜಾರಿ ನಿರ್ದೇಶನಾಲಯವು ಬ್ಯಾಂಕ್‌ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ ಕೆಲ ಆಸ್ತಿಗಳನ್ನು ಬ್ಯಾಂಕ್‌ಗೆ ಮತ್ತೆ ನೀಡುವ ಕುರಿತು ಜಾರಿ ನಿರ್ದೇಶನಾಲಯವೇ ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬೇಕು ಎಂದು ಪೀಠ ಆದೇಶ ನೀಡಿತ್ತು. ಆದರೆ, ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಕ ಮಾಡಿರುವುದರಿಂದ ಅವರು ಅರ್ಜಿ ಸಲ್ಲಿಸಬೇಕಾಗುತ್ತದೆ” ಎಂದರು.

ಜಾರಿ ನಿರ್ದೇಶನಾಲಯದ ವಕೀಲರ ಮನವಿ ಪುರಸ್ಕರಿಸಿದ ಪೀಠವು ಹಿಂದಿನ ಆದೇಶವನ್ನು ಮಾರ್ಪಾಡು ಮಾಡಿತು. ಅಲ್ಲದೆ, ಅರ್ಜಿದಾರರ ವಕೀಲರಿಗೆ ನ್ಯಾಯಾಲಯದ ಆದೇಶಗಳ ಪಾಲನೆ ಬಗ್ಗೆ ವರದಿಯನ್ನು ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 44 ಸಾವಿರ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನಲ್ಲಿ 3,300 ಠೇವಣಿದಾರ ಸದಸ್ಯರಿದ್ದು, ಒಟ್ಟು 253 ಕೋಟಿ ರೂಪಾಯಿ ಠೇವಣಿ ಹಣ ಇತ್ತು. ಯಾವುದೇ ಅಡಮಾನ ಅಥವಾ ಖಾತರಿ ಇಲ್ಲದೇ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ನಕಲಿ ಖಾತೆದಾರರಿಗೆ 1,650 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಇದರಿಂದಾಗಿ ಅರ್ಹ ಠೇವಣಿದಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ಷೇಪಿಸಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.

ಹಗರಣದಲ್ಲಿ ಬ್ಯಾಂಕ್ ಮತ್ತು ಕ್ರೆಡಿಟ್ ಸೂಸೈಟಿಯ ಪದಾಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಬಾಣಸವಾಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ.