ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 8ರಂದು ನವದೆಹಲಿಯಲ್ಲಿ ನಡೆದ ನ್ಯಾಯಮೂರ್ತಿಗಳ ಸಭೆಗೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವಾಲಯ ಟ್ವೀಟ್ ಮಾಡಿರುವುದು ಸಚಿವಾಲಯದ ತಪ್ಪು ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಮತ್ತು ವಕೀಲ ಅಲೋಕ್ ಕುಮಾರ್ “ಬಾರ್ ಅಂಡ್ ಬೆಂಚ್”ಗೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕೇಂದ್ರದ ರಾಜ್ಯ ಖಾತೆ ಕಾನೂನು ಸಚಿವ (ಸ್ವತಂತ್ರ ಖಾತೆ) ಅರ್ಜುನ್ ರಾಮ್ ಮೇಘವಾಲ್ ಸಭೆಯಲ್ಲಿ ಭಾಗವಹಿಸಿದ್ದರು.
ಭಾರತದ ಸುಧಾರಣೆಗೆ ಸಂಬಂಧಿಸಿದ ವಿಷಯಗಳು ಕುರಿತು ಚರ್ಚಿಸಲು ಆಯೋಜಿಸಿದ್ದ ಖಾಸಗಿ ಸಭೆ ಇದಾಗಿತ್ತು. “ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳು ಮಾತ್ರ ಭಾಗವಹಿಸಿದ್ದರು. ಇದೊಂದು ಗೌಪ್ಯ ಸಭೆಯಾಗಿದ್ದು, ಕಾನೂನು ಸಚಿವರು ಸಭೆಯ ಚಿತ್ರಗಳನ್ನು ಸಾರ್ವಜನಿಕಗೊಳಿಸಿದ್ದು ಪ್ರಮಾದ” ಎಂದು ಹೇಳಿದ್ದಾರೆ.
ವಕ್ಫ್ ಮಸೂದೆ, ಮಂದಿರ-ಮಸೀದಿ ವಿಚಾರಗಳು ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚಿಸಲು ಸಭೆ ಆಯೋಜಿಸಲಾಗಿತ್ತು ಎಂದು ಕುಮಾರ್ ಹೇಳಿದ್ದಾರೆ. “ಸಭೆಗೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನು ನಾವು ಆಹ್ವಾನಿಸಿದ್ದೆವು. ವಕ್ಫ್ (ತಿದ್ದುಪಡಿ) ಮಸೂದೆ, ದೇವಸ್ಥಾನಗಳ ಮರಳಿ ಪಡೆಯುವಿಕೆ, ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಮರಳಿಪಡೆಯುವುದು, ಮತಾಂತರದಂಥ ವಿಚಾರಗಳು ಸಮಾಜದ ಮುಂದಿದ್ದು, ಅವುಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ನ್ಯಾಯಮೂರ್ತಿಗಳು ಮತ್ತು ವಿಎಚ್‌ಪಿ ನಡುವೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವುದು ಸಭೆಯ ಉದ್ದೇಶವಾಗಿದ್ದು, ಇದರಿಂದ ಉಭಯರಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ” ಎಂದು ಹೇಳಲಾಗಿದೆ.
ಸಚಿವ ಮೇಘವಾಲ್ ಸಭೆಗೆ ಸಂಬಂಧಿಸಿದ ಚಿತ್ರಗಳನ್ನು ಎಕ್ಸ್‌ನಲ್ಲಿ ಪ್ರಕಟಿಸುತ್ತಿದ್ದಂತೆ ಭಾರಿ ಚರ್ಚೆ ಆರಂಭವಾಗಿತ್ತು.
ಗುರುತು ಬಹಿರಂಗಪಡಿಸಲು ಇಚ್ಛಿಸಿದ ವಿಎಚ್‌ಪಿಯ ಮುಖಂಡರೊಬ್ಬರು “ಸಭೆಯಲ್ಲಿ ದೆಹಲಿ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಬ್ಬರು ಭಾಗವಹಿಸಿದ್ದರು” ಎಂದು “ಬಾರ್ ಅಂಡ್ ಬೆಂಚ್”ಗೆ ತಿಳಿಸಿದ್ದಾರೆ. ಈ ಕುರಿತು ಅಧಿಕೃತವಾಗಿ ವಿಎಚ್‌ಪಿ ಅಧ್ಯಕ್ಷ ಕುಮಾರ್ ಅವರನ್ನು ಪ್ರಶ್ನಿಸಿದಾಗ ಅವರು ಅದನ್ನು ನಿರಾಕರಿಸಿದ್ದಾರೆ.
ಈಚೆಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೋಹಿತ್ ಆರ್ಯ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದು ಮೇಘವಾಲ್ ಪ್ರಕಟಿಸಿರುವ ಚಿತ್ರಗಳಲ್ಲಿ ಖಚಿತವಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಪ್ರಮುಖರೊಂದಿಗೆ ವೇದಿಕೆಯಲ್ಲಿದ್ದರು. ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಗುಪ್ತಾ ಅವರು ನಿವೃತ್ತಿಯ ಬಳಿಕ ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಮುಖ್ಯಸ್ಥರಾಗಿ, ಎ ಕೆ ಗೋಯಲ್ ಅವರು ಕಳೆದ ವರ್ಷದ ಜುಲೈ ವರೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷರಾಗಿದ್ದರು.