ಯೂಟ್ಯೂಬರ್‌ಗಳು ಮತ್ತು ವಸ್ತುವಿಷಯ ರೂಪಿಸುವವರು ಆದಾಯ ಗಳಿಕೆಗಾಗಿ ನ್ಯಾಯಾಲಯದ ಕಲಾಪಗಳ ವಿಡಿಯೋ ತುಣುಕುಗಳನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್ ಗವಾಯಿ ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಕೀನ್ಯಾ ರಾಜಧಾನಿ ನೈರೋಬಿಯಲ್ಲಿ 'ನ್ಯಾಯಾಂಗದೊಳಗೆ ತಂತ್ರಜ್ಞಾನದ ಮೇಲೆ ಸದುಪಯೋಗ' ಎಂಬ ವಿಷಯದ ಕುರಿತು ನ್ಯಾಯಮೂರ್ತಿ ಗವಾಯಿ ಮಾತನಾಡಿದರು. ಕೀನ್ಯಾದ ಸುಪ್ರೀಂ ಕೋರ್ಟ್ ಆಹ್ವಾನದ ಮೇರೆಗೆ ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಸೂರ್ಯ ಕಾಂತ್ ಅವರು ಆಫ್ರಿಕಾ ರಾಷ್ಟ್ರವಾದ ಕೀನ್ಯಾಕ್ಕೆ ಐದು ದಿನಗಳ ಕಾಲ ಭೇಟಿ ನೀಡಿದ್ದಾರೆ.
ಕೆಲವೊಮ್ಮೆ ನ್ಯಾಯಾಲಯದ ಕಲಾಪಗಳನ್ನು ರೋಚಕಗೊಳಿಸುವ ಮತ್ತು ತಪ್ಪಾಗಿ ಅರ್ಥೈಸುವ ರೀತಿಯಲ್ಲಿ ಕಲಾಪಗಳಿಗೆ ಸಂಬಂಧಿಸಿದ ಸಣ್ಣ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ನ್ಯಾ. ಗವಾಯಿ ಹೇಳಿದರು.
ಇನ್ನು ಕೆಲವೇ ತಿಂಗಳುಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲಿರುವ ಅವರು ನ್ಯಾ. ಗವಾಯಿ ಅವರ ಭಾಷಣದ ಪ್ರಮುಖ ಅಂಶಗಳು ಹೀಗಿವೆ:
ವಿಡಿಯೋ ತುಣುಕಗುಳನ್ನು ಸಂದರ್ಭದಿಂದಾಚೆಗೆ ಇಟ್ಟಾಗ ತಪ್ಪು ಮಾಹಿತಿ, ನ್ಯಾಯಾಂಗ ಚರ್ಚೆಗಳ ತಪ್ಪು ವ್ಯಾಖ್ಯಾನ ಮತ್ತು ತಪ್ಪಾದ ವರದಿಗೆ ಕಾರಣವಾಗಬಹುದು.
ಹೀಗೆ ನ್ಯಾಯಾಲಯದ ಕಲಾಪಗಳ ವಿಡಿಯೋಗಳನ್ನು ಸಣ್ಣ ತುಣುಕುಗಳಾಗಿ ತಮ್ಮದೇ ಸ್ವಂತ ವಸ್ತುವಿಷಯದ (ಕಂಟೆಂಟ್) ರೀತಿಯಲ್ಲಿ ಮರು ಅಪ್‌ಲೋಡ್ ಮಾಡುವ ಮೂಲಕ ಯೂಟ್ಯೂಬರ್ ಇಲ್ಲವೇ ವಸ್ತುವಿಷಯ ರಚನೆಕಾರರು (ಕಂಟೆಂಟ್ ಕ್ರಿಯೇಟರ್‌ಗಳು) ಬೌದ್ಧಿಕ ಆಸ್ತಿ ಹಕ್ಕು ಮತ್ತು ನ್ಯಾಯಾಂಗ ರೆಕಾರ್ಡಿಂಗ್‌ಗಳ ಮಾಲೀಕತ್ವದ ಕುರಿತು ಗಂಭೀರ ಪ್ರಶ್ನೆ ಹುಟ್ಟು ಹಾಕಿದ್ದಾರೆ.
ಹಾಗೆ ವಸ್ತುವಿಷಯಗಳನ್ನು ಅನಧಿಕೃತವಾಗಿ ಬಳಸುವುದು ಮತ್ತು ಹಣ ಗಳಿಸುವುದು ಸಾರ್ವಜನಿಕರಿಗೆ ಕಲಾಪಗಳ ಲಭ್ಯವಾಗುವಿಕೆ ಮತ್ತು ನೈತಿಕ ಚೌಕಟ್ಟಿಗೊಳಪಟ್ಟ ಪ್ರಸಾರದ ನಡುವಿನ ರೇಖೆಗಳನ್ನು ಮಸುಕಾಗಿಸುತ್ತದೆ.
ಚಾಟ್ ಜಿಪಿಟಿಯಂತಹ ಎಐ ಸೌಲಭ್ಯ ಒದಗಿಸುವ ತಂತ್ರಾಂಶಗಳು ನಕಲಿ ಪ್ರಕರಣಗಳನ್ನು ಸೃಷ್ಟಿಸಿ ಕಾನೂನು ಸಂಗತಿಗಳನ್ನು ರೂಪಿಸಿರುವ ನಿದರ್ಶನಗಳಿರುವುದರಿಂದ ಎಐ ಗಮನಾರ್ಹ ಅಪಾಯ ಒಡ್ಡುತ್ತದೆ ಎಂದು ಅವರು ಹೇಳಿದರು.
ತೀರ್ಪನ್ನು ಊಹಿಸಲು ಸಾಧನವಾಗಿ ಎಐ ತಂತ್ರಜ್ಞಾನ ಬಳಸುತ್ತಿರುವುದರಿಂದ ನ್ಯಾಯಾಂಗ ತೀರ್ಪುಗಳಲ್ಲಿ ಅದರ ಪಾತ್ರದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ.
ನ್ಯಾಯಾಲಯದ ತೀರ್ಪುಗಳು ಕೇವಲ ಅಂಕಿ-ಸಂಖ್ಯೆಗಳಲ್ಲ. ಆದ್ದರಿಂದ ಎಐಯನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು.
ನೇರ ಪ್ರಸಾರ ಮತ್ತು ವರ್ಚುವಲ್ ನ್ಯಾಯಾಲಯಗಳ ವಿಕಾಸ ಭಾರತದಲ್ಲಿ ಕಿರಿಯ ವಕೀಲರು ಮತ್ತು ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುವವರಿಗೆ ಅನುಕೂಲಕರವಾಗಿದ್ದು ಈ ತಂತ್ರಜ್ಞಾನ ಇಲ್ಲದಿದ್ದರೆ ಅವರೆಲ್ಲಾ ಉನ್ನತ ನ್ಯಾಯಾಂಗ ವೇದಿಕೆಗಳಲ್ಲಿ ತಮ್ಮನ್ನು ಪ್ರತಿನಿಧಿಸಲು ಕಷ್ಟಪಡಬೇಕಿತ್ತು.