Attorney General KK Venugopal 
ಸುದ್ದಿಗಳು

ದೇಶದ್ರೋಹ ಸೆಕ್ಷನ್‌ ದುರ್ಬಳಕೆ ನಿಯಂತ್ರಣ; ಕೇದಾರನಾಥ್ ತೀರ್ಪು ಎತ್ತಿ ಹಿಡಿಯಲು ಸುಪ್ರೀಂಗೆ ಎಜಿ ವೇಣುಗೋಪಾಲ್‌ ಮನವಿ

ಕೇದರನಾಥ್‌ ಸಿಂಗ್‌ ವರ್ಸಸ್‌ ಬಿಹಾರ ರಾಜ್ಯ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿರುವುದರಿಂದ ಹಾಲಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಿಚಾರಣೆಗೆ ವರ್ಗಾವಣೆ ಮಾಡಬೇಕೆ ಎಂಬುದರ ಕುರಿತು ಪೀಠವು ಮೊದಲಿಗೆ ವಾದ ಆಲಿಸಲಿದೆ.

Bar & Bench

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 124ಎ ಅಡಿ ಬರುವ ರಾಷ್ಟ್ರದ್ರೋಹದ ವಿಷಯದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಮನವಿಗಳನ್ನು ವಿಚಾರಣೆಗೆಗಾಗಿ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ ಎಂಬುದಕ್ಕೆ ಸಂಬಂಧಿಸಿದ ವಾದವನ್ನು ಸುಪ್ರೀಂ ಕೋರ್ಟ್‌ ಮೇ 10ರಂದು ಆಲಿಸಲಿದೆ.

ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆ ಎನ್ನುವುದಕ್ಕೆ ಸಂಬಂಧಿಸಿದ ವಿಚಾರದ ಕುರಿತು ವಾದ ಮಂಡಿಸಲು ಮುಂದಿನ ಮಂಗಳವಾರ ಒಂದು ತಾಸು ನಿಗದಿಪಡಿಸಲಾಗುವುದು. ಈ ವೇಳೆ ಅರ್ಜಿದಾರರು ಮತ್ತು ಸರ್ಕಾರದ ವಕೀಲರಿಗೆ ವಾದಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಹೇಳಿದೆ.

“ಕೇದರನಾಥ್‌ ಸಿಂಗ್‌ ವರ್ಸಸ್‌ ಬಿಹಾರ ಸರ್ಕಾರದ ಪ್ರಕರಣದಲ್ಲಿ ಸೆಕ್ಷನ್‌ 124ಎ ಅನ್ನು ಎತ್ತಿ ಹಿಡಿದಿರುವ ತೀರ್ಪು ಸರಿಯಾಗಿದ್ದು, ಅದನ್ನು ಎತ್ತಿ ಹಿಡಿಯಬೇಕಿದೆ. ಐಪಿಸಿ ಸೆಕ್ಷನ್‌ 124ಎ ದುರ್ಬಳಕೆಯನ್ನು ನಿಯಂತ್ರಿಸಲಾಗಿದ್ದು, ಕೇದರನಾಥ್‌ ಪ್ರಕರಣದಲ್ಲಿನ ತೀರ್ಪು ಸರಿಯಾಗಿರುವುದರಿಂದ ಹಾಲಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಹೇಳಿದರು.

“ಸೆಕ್ಷನ್‌ 124ಎ ಗೆ ಸಂಬಂಧಿಸಿದಂತೆ ಮಾರ್ಗಸೂಚಿ ರಚಿಸಬೇಕಿದೆ. ಯಾವುದಕ್ಕೆ ಅನುಮತಿಸಬಹುದು ಮತ್ತು ಯಾವುದಕ್ಕೆ ಅನುಮತಿಸಬಾರದು ಹಾಗೂ ಏನೆಲ್ಲಾ ದೇಶದ್ರೋಹದಡಿ ಬರಬಹುದು ಎಂಬುದನ್ನು ವಿವರಿಸಬೇಕಿದೆ. ಹನುಮಾನ್‌ ಚಾಲೀಸಾ ಪಠಿಸಿದವರ ವಿರುದ್ಧ ನಿನ್ನೆ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಲಾಗಿದೆ. ಈ ದೇಶದಲ್ಲಿ ಏನಾಗುತ್ತಿದೆ ನೋಡಿ” ಎಂದು ಇದೇ ವೇಳೆ ಅವರು ಗಮನಸೆಳೆದರು.

ಎಜಿ ಅವರ ನಿಲುವು ಕೇಂದ್ರ ಸರ್ಕಾರದ ನಿಲುವಿಗಿಂತ ಭಿನ್ನವಿರಬಹುದು. ಎರಡು ದಿನಗಳಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.