Election
Election  
ಸುದ್ದಿಗಳು

ಜಾತಿ ಪ್ರಮಾಣಪತ್ರ ಅಮಾನ್ಯವಾದ ಮಾತ್ರಕ್ಕೆ ಶಾಸಕರು ಅನರ್ಹರಾಗುವುದಿಲ್ಲ, ಚುನಾವಣಾ ಅರ್ಜಿ ಸಲ್ಲಿಸಬೇಕು: ಹೈಕೋರ್ಟ್

Bar & Bench

ತನ್ನ ಜಾತಿ ಅಥವಾ ಪಂಗಡದ ಪ್ರಮಾಣಪತ್ರ ಅಸಿಂಧುವಾದ ಮಾತ್ರಕ್ಕೆ ಹಾಲಿ ಶಾಸಕ ತನ್ನಿಂತಾನೇ ಅನರ್ಹಗೊಳ್ಳುವುದಿಲ್ಲ ಎಂದು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠ ಇತ್ತೀಚೆಗೆ ಹೇಳಿದೆ [ಜಗದೀಶ್ಚಂದ್ರ ರಮೇಶ್‌ ವಾಲ್ವಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಜಾತಿ ಪ್ರಮಾಣ ಪತ್ರ ಅಸಿಂಧುವಾದಾಗಲೂ ಚುನಾಯಿತ ಅಭ್ಯರ್ಥಿಯನ್ನು ಪದಚ್ಯುತಗೊಳಿಸಲು ಪ್ರಜಾಪ್ರತಿನಿಧಿ ಕಾಯಿದೆ ಅಡಿಯಲ್ಲಿ ಚುನಾವಣಾ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಮಂಗೇಶ್ ಪಾಟೀಲ್ ಮತ್ತು ವೈ ಬಿ ಖೋಬ್ರಾಗಡೆ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ಹೀಗಾಗಿ ಶಿವಸೇನೆಯ ಏಕನಾಥ್‌ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿರುವ ಲತಾಬಾಯಿ ಸೊನಾವಣೆ  ಅವರಿಗೆ ಹೈಕೋರ್ಟ್‌ ಕಾಲಾವಕಾಶ ನೀಡಿದೆ. ಸೊನಾವಣೆ ಅವರ ಪರಿಶಿಷ್ಟ ಪಂಗಡ ಪ್ರಮಾಣ ಪತ್ರವನ್ನು ಈ ಹಿಂದೆ ಬಾಂಬೆ ಹೈಕೋರ್ಟ್‌ ಅಸಿಂಧುಗೊಳಿಸಿತ್ತು. ಸುಪ್ರೀಂ ಕೋರ್ಟ್‌ ಅದನ್ನು ಎತ್ತಿ ಹಿಡಿದಿತ್ತು.  

ಅರ್ಜಿದಾರ ಜಗದೀಶ್ಚಂದ್ರ ವಾಲ್ವಿ ಅವರು ಈಗಾಗಲೇ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 80 ಎ ಅಡಿಯಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದು ಅದು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ ಎಂಬ ವಿಚಾರವನ್ನು ಆರಂಭದಲ್ಲಿ ಪೀಠ ಗಮನಿಸಿತು.

"ಅರ್ಜಿದಾರರು ಕಾನೂನಾತ್ಮಕವಾಗಿ ಲಭ್ಯವಿರುವ ಶಾಸನಬದ್ಧ ಪರಿಹಾರಕ್ಕಾಗಿ ಈಗಾಗಲೇ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ (ರಿಟ್ ಅರ್ಜಿ ಸಲ್ಲಿಸುವ ಮೂಲಕ) ಅರ್ಜಿ ಸಲ್ಲಿಸುವ ಮುಖೇನ ಏಕಕಾಲಕ್ಕೆ ಈ ನ್ಯಾಯಾಲಯದ ಅಧಿಕಾರವನ್ನು ಸಹ ಕೋರಲಾಗದು" ಎಂದು ಪೀಠ ಹೇಳಿತು. ಈ ಕಾರಣಕ್ಕಾಗಿಯೇ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ಅದು ತಿಳಿಸಿತು.  

ಸಂವಿಧಾನ ಮತ್ತು ಜನಪ್ರತಿನಿಧಿ ಕಾಯಿದೆಯ ಪ್ರಕಾರ ಸೊನಾವಣೆ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಅದು ಹೇಳಿತು. "ವಿವಿಧ ರಾಜ್ಯ ಶಾಸನಗಳಲ್ಲಿ ಒಳಗೊಂಡಿರುವ ನಿರ್ದಿಷ್ಟ ನಿಯಮಾವಳಿಗಳ ಹಾಗಲ್ಲದೆ, ಅಭ್ಯರ್ಥಿಯು ನಿರ್ದಿಷ್ಟ ವರ್ಗಕ್ಕೆ ಮೀಸಲಾದ ಸ್ಥಾನಕ್ಕೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ದೇಶಿಸಿದಾಗ ಜಾತಿ/ಪಂಗಡದ ಸಿಂಧುತ್ವ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವ ಬಗ್ಗೆ ಸಂವಿಧಾನ ಅಥವಾ ಜನಪ್ರತಿನಿಧಿ ಕಾಯಿದೆಯಲ್ಲಿ ಯಾವುದೇ ಷರತ್ತು ಇಲ್ಲ" ಎಂದು ಪೀಠ ತಿಳಿಸಿತು. ಈ ಅವಲೋಕನಗಳೊಂದಿಗೆ ಪೀಠ ಮನವಿಯನ್ನು ವಜಾಗೊಳಿಸಿತು.