ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಶನಿವಾರ ನಿರಾಕರಿಸಿದೆ.
ಬೆಂಗಳೂರಿನ ವಕೀಲ ಎ ಎಸ್ ಹರೀಶ್ ಅವರು ವಿಶ್ವನಾಥ್ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕಟಿಸಿತು.
ಬಿಡಿಎ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಯಾವುದೇ ನಿಯಮಗಳು ಇಲ್ಲದ ಕಾರಣ ಇನ್ನು ಮುಂದೆ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರ ನೇಮಕಕ್ಕೆ ವಿಶೇಷ ನಿಯಮಾವಳಿ ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ಹಾಲಿ ನೇಮಕಾತಿಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಬಿಡಿಎ ಅಧ್ಯಕ್ಷರಾಗಿ ಎಸ್ ಆರ್ ವಿಶ್ವನಾಥ್ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಆರೋಪದಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿ ರಾಜ್ಯಪಾಲರ ಪರಿಶೀಲನೆಯಲ್ಲಿದೆ. ಹೀಗಾಗಿ, ನ್ಯಾಯಾಲಯವು ರಾಜ್ಯಪಾಲರ ಕಚೇರಿಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಪೀಠವು ಇತ್ಯರ್ಥಪಡಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು “ಕಾನೂನು ಪ್ರಕಾರ ಶಾಸಕರು ಸರ್ಕಾರದ ಅಧೀನ ಸಂಸ್ಥೆಗೆ ಸಂಬಂಧಿಸಿದ ಸಮಿತಿಯಲ್ಲಿ ಅಧ್ಯಕ್ಷರಾಗಿರಬಹುದು. ಆದರೆ, ಬಿಡಿಎ ಸಮಿತಿಯಲ್ಲ. ಅದೊಂದು ಶಾಸನಾತ್ಮಕವಾಗಿ ರಚಿಸಲ್ಪಟ್ಟಿರುವ ಪ್ರಾಧಿಕಾರವಾಗಿದ್ದು, ಅದಕ್ಕೆ ಅಧ್ಯಕ್ಷರಾಗಿ ಶಾಸಕ ವಿಶ್ವನಾಥ್ ನೇಮಕಗೊಂಡಿದ್ದಾರೆ. ಅಧ್ಯಕ್ಷ ಹುದ್ದೆಗೆ ವೇತನ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಶಾಸಕರೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ವಿಶ್ವನಾಥ್ ಲಾಭದಾಯಕ ಹುದ್ದೆ ಹೊಂದಿದ್ದು, ಅವರನ್ನು ಅನರ್ಹಗೊಳಿಸಬೇಕು” ಎಂದು ಕೋರಿದ್ದರು.
ವಿಶ್ವನಾಥ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಶಾಸಕರನ್ನು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ವಿಶ್ವನಾಥ್ ಶಾಸಕ ಸ್ಥಾನಕ್ಕೆ ವೇತನ, ಭತ್ಯೆ ಪಡೆಯುತ್ತಿಲ್ಲ. ಕೇವಲ ಬಿಡಿಎಯಿಂದ ವೇತನ ಹಾಗೂ ಭತ್ಯೆ ಪಡೆಯುತ್ತಿದ್ದಾರೆ. ಹೀಗಾಗಿ, ಬಿಡಿಎ ಅಧ್ಯಕ್ಷ ಹುದ್ದೆಯಂತಹ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಹೇಳಲಾಗದು. ಆದ್ದರಿಂದ ಅರ್ಜಿ ವಜಾಗೊಳಿಸಬೇಕು” ಎಂದು ವಾದಿಸಿದ್ದರು.