Dr. Suraj Revanna and Karnataka HC
Dr. Suraj Revanna and Karnataka HC  
ಸುದ್ದಿಗಳು

ವಿಧಾನ ಪರಿಷತ್ ಸದಸ್ಯತ್ವ ರದ್ದು ಪ್ರಕರಣ: ಸೂರಜ್ ರೇವಣ್ಣಗೆ ಹೈಕೋರ್ಟ್ ಸಮನ್ಸ್

Bar & Bench

ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾಗಿರುವ ವಿಧಾನ ಪರಿಷತ್ ಸದಸ್ಯ ಜೆಡಿಎಸ್‌ನ ಡಾ. ಸೂರಜ್ ರೇವಣ್ಣ ಅವರ ಸದಸ್ಯತ್ವ ರದ್ದತಿ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ಸಮನ್ಸ್ ಜಾರಿಗೊಳಿಸಿದೆ.

ಹೊಳೆನರಸೀಪುರ ತಾಲ್ಲೂಕಿನ ಕಮ್ಮಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಎಲ್ ಹನುಮೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು “ಸೂರಜ್ ರೇವಣ್ಣ ನೋಟಿಸ್ ಸ್ವೀಕರಿಸುವ ಪ್ರಕ್ರಿಯೆಯಲ್ಲಿ ಸಹಕರಿಸುತ್ತಿಲ್ಲ. ಈಗಾಗಲೇ ಸಾಕಷ್ಟು ವಿಳಂಬ ಮಾಡಿದ್ದಾರೆ. ಆದ್ದರಿಂದ, ಅಲ್ಲಿನ ಜಿಲ್ಲಾ ನ್ಯಾಯಾಧೀಶರ ಮೂಲಕ ನೋಟಿಸ್‌ ಜಾರಿಗೊಳಿಸಲು ನಿರ್ದೇಶಿಸಬೇಕು" ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು "ಕಾನೂನು ಪ್ರಕಾರ ಈಗ ಸಮನ್ಸ್ ಜಾರಿಗೊಳಿಸೋಣ. ಸ್ವೀಕರಿಸದೇ ಹೋದಲ್ಲಿ ಮುಂದಿನದನ್ನು ನೋಡೋಣ" ಎಂದು ಹೇಳಿ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿತು.

ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ರೇವಣ್ಣ ತಮ್ಮ ವೈವಾಹಿಕ ವಿವರ ಬಚ್ಚಿಟ್ಟಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಡಾ. ಸೂರಜ್ ರೇವಣ್ಣ ಅವರು ಜಿಲ್ಲಾ ಚುನಾವಣಾ ಅಧಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ ನಮೂನೆ 26ರಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಮಾಹಿತಿಗಳನ್ನು ನಮೂದಿಸಿಲ್ಲ. ಪತ್ನಿಯ ವಿವರಗಳಿಗೆ ಸಂಬಂಧಿಸಿದ ನಗದು, ಸ್ಥಿರಾಸ್ತಿ, ಬ್ಯಾಂಕ್ ಖಾತೆ ಮತ್ತಿತರೆ ವಿವರಗಳನ್ನು ನಮೂದಿಸುವ ಕಾಲಂಗಳು "ಅನ್ವಯವಾಗುವುದಿಲ್ಲ" ಎಂದು ತಿಳಿಸಿದ್ದಾರೆ. ಸೂರಜ್ ರೇವಣ್ಣ ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ. ಆದ್ದರಿಂದ, ಅವರ ನಾಮಪತ್ರ ಅಂಗೀಕರಿಸಿರುವ ಕ್ರಮವನ್ನು ರದ್ದುಪಡಿಸಿ, ಅವರ ಉಮೇದುವಾರಿಕೆಯನ್ನು ಅನರ್ಹ ಎಂದು ಘೋಷಿಸಬೇಕು" ಎಂದು ಕೋರಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಸೂರಜ್‌ ಅವರ ನಾಮಪತ್ರ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಿದ್ದ ನ್ಯಾಯಾಲಯವು “ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಮೇಲೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಚುನಾವಣಾ ತಕರಾರು ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಪಡೆಯಿರಿ" ಎಂದು ಅರ್ಜಿದಾರರಿಗೆ ಸೂಚಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.