Dr. Suraj Revanna and Karnataka HC  
ಸುದ್ದಿಗಳು

ವಿಧಾನ ಪರಿಷತ್ ಸದಸ್ಯತ್ವ ರದ್ದು ಪ್ರಕರಣ: ಸೂರಜ್‌ಗೆ ನೋಟಿಸ್‌ ಜಾರಿ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಿದ ಹೈಕೋರ್ಟ್‌

ಮಾ.11ರಂದು ಸೂರಜ್‌ಗೆ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಆದರೆ, ಅದನ್ನು ಸೂರಜ್ ರೇವಣ್ಣ ಅವರು ಸ್ವೀಕರಿಸದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಿಗೆ ನೋಟಿಸ್ ಜಾರಿಗೊಳಿಸಿ, ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಆದೇಶ ಮಾಡಿದೆ.

Bar & Bench

ಹಾಸನ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಜೆಡಿಎಸ್‌ನ ಡಾ. ಸೂರಜ್ ರೇವಣ್ಣ ಅವರಿಗೆ ಹಾಸನ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮೂಲಕ ನೋಟಿಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಹೊಳೆನರಸೀಪುರ ತಾಲ್ಲೂಕಿನ ಕಮ್ಮಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಎಲ್ ಹನುಮೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಕಳೆದ ಮಾರ್ಚ್ 11ರಂದು ಸೂರಜ್ ರೇವಣ್ಣ ಅವರಿಗೆ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಆದರೆ, ಅದನ್ನು ಸೂರಜ್ ರೇವಣ್ಣ ಸ್ವೀಕರಿಸದ ಹಿನ್ನೆಲೆಯಲ್ಲಿ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ನೋಟಿಸ್ ಜಾರಿಗೊಳಿಸಬೇಕು. ಬಳಿಕ ವರದಿ ಸಲ್ಲಿಸಬೇಕು ಎಂದು ಪೀಠವು ಆದೇಶ ಮಾಡಿದೆ.

ಕಳೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು “ಪ್ರತಿವಾದಿ ಸೂರಜ್ ರೇವಣ್ಣ ನೋಟಿಸ್ ಸ್ವೀಕರಿಸುವ ಕಾನೂನು ಪ್ರಕ್ರಿಯೆಗೆ ಸಹಕರಿಸುತ್ತಿಲ್ಲ. ಈಗಾಗಲೇ ಸಾಕಷ್ಟು ವಿಳಂಬ ಮಾಡಿದ್ದಾರೆ. ಆದ್ದರಿಂದ, ಸ್ಥಳೀಯ ಜಿಲ್ಲಾ ನ್ಯಾಯಾಧೀಶರ ಮುಖಾಂತರ ಜಾರಿಗೊಳಿಸಲು ನಿರ್ದೇಶಿಸಬೇಕು” ಎಂದು ಕೋರಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ್ದ ಪೀಠವು “ಕಾನೂನು ಪ್ರಕಾರ ಈಗ ಸಮನ್ಸ್ ಜಾರಿಗೊಳಿಸೋಣ. ಸ್ವೀಕರಿಸದೇ ಹೋದಲ್ಲಿ ಮುಂದಿನ ಪ್ರಕ್ರಿಯೆ ನೋಡೋಣ” ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತ್ತು.

ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ರೇವಣ್ಣ ತಮ್ಮ ವೈವಾಹಿಕ ವಿವರ ಬಚ್ಚಿಟ್ಟಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಡಾ. ಸೂರಜ್ ರೇವಣ್ಣ ಅವರು ಜಿಲ್ಲಾ ಚುನಾವಣಾ ಅಧಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ ನಮೂನೆ 26ರಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಮಾಹಿತಿಗಳನ್ನು ನಮೂದಿಸಿಲ್ಲ.

ಪತ್ನಿಯ ವಿವರಗಳಿಗೆ ಸಂಬಂಧಿಸಿದ ನಗದು, ಸ್ಥಿರಾಸ್ತಿ, ಬ್ಯಾಂಕ್ ಖಾತೆ ಮತ್ತಿತರೆ ವಿವರಗಳನ್ನು ನಮೂದಿಸುವ ಕಾಲಂಗಳು "ಅನ್ವಯವಾಗುವುದಿಲ್ಲ" ಎಂದು ತಿಳಿಸಿದ್ದಾರೆ. ಸೂರಜ್ ರೇವಣ್ಣ ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ. ಆದ್ದರಿಂದ, ಅವರ ನಾಮಪತ್ರ ಅಂಗೀಕರಿಸಿರುವ ಕ್ರಮವನ್ನು ರದ್ದುಪಡಿಸಿ, ಅವರ ಉಮೇದುವಾರಿಕೆಯನ್ನು ಅನರ್ಹ ಎಂದು ಘೋಷಿಸಬೇಕು ಎಂದು ಕೋರಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಸೂರಜ್‌ ಅವರ ನಾಮಪತ್ರ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಿದ್ದ ನ್ಯಾಯಾಲಯವು “ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಮೇಲೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಚುನಾವಣಾ ತಕರಾರು ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಪಡೆಯಿರಿ" ಎಂದು ಅರ್ಜಿದಾರರಿಗೆ ಸೂಚಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.