BBMP 
ಸುದ್ದಿಗಳು

ಸಂಚಾರಿ ಶಿಕ್ಷಣ ಯೋಜನೆ:‌ ಸಮಗ್ರ ವರದಿ ಸಲ್ಲಿಸಲು ಬಿಬಿಎಂಪಿಗೆ ನಿರ್ದೇಶಿಸಿದ ಹೈಕೋರ್ಟ್‌

ಬೀದಿ ಬದಿಯ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಬೆಂಗಳೂರಿನ ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್‌ ಎಸ್‌. ಕಿಣಗಿ ಅವರ ಪೀಠದ ಮುಂದೆ ವಕೀಲರು ಉಲ್ಲೇಖಿಸಿದರು.

Bar & Bench

ಬೆಂಗಳೂರಿನ ರಸ್ತೆಗಳು ಹಾಗೂ ಸಿಗ್ನಲ್‌ಗಳಲ್ಲಿ ಸಣ್ಣ ಪುಟ್ಟ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿರುವ ಮಕ್ಕಳಿಗೆ ಕೋವಿಡ್‌ ಬಳಿಕ ಜಾರಿ ಮಾಡಿದ್ದ ಸಂಚಾರಿ ಶಿಕ್ಷಣ ಯೋಜನೆಗೆ (ಮೊಬೈಲ್‌ ಎಜುಕೇಷನ್‌) ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತ ಸಮಗ್ರ ವರದಿ ಸಲ್ಲಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಸೂಚಿಸಿತು.

ಬೀದಿ ಬದಿಯ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಬೆಂಗಳೂರಿನ ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್‌ ಎಸ್‌. ಕಿಣಗಿ ಅವರ ಪೀಠದ ಮುಂದೆ ವಕೀಲರು ಉಲ್ಲೇಖಿಸಿ, ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಅವರಿಗೆ ಸೂಚಿಸಿತು. ಅಲ್ಲದೇ, ಗುರುವಾರ ಅರ್ಜಿಯನ್ನು ವಿಚಾರಣೆಗೆ ನಿಗದಿ ಪಡಿಸುವಂತೆ ಸೂಚನೆ ನೀಡಿತು.

ಅರ್ಜಿದಾರರ ಮನವಿ ಏನು?: ಬೆಂಗಳೂರಿನ ಬೀದಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಸಿಗ್ನಲ್‌ಗಳಲ್ಲಿ ಪೆನ್, ಆಟಿಕೆಗಳು, ಇಯರ್ ಬಡ್ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆಗೆ ಚಿಕ್ಕ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಬಾಲ ನ್ಯಾಯ ಕಾಯಿದೆ ಹಾಗೂ ಸಂವಿಧಾನದ 21ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಆದ್ದರಿಂದ, ಮಕ್ಕಳನ್ನು ಮಾರಾಟ ಮಾಡುವ ಕೆಲಸಕ್ಕೆ ಬಳಸಿಕೊಳ್ಳದಂತೆ ಹಾಗೂ ಅವರನ್ನು ಶಾಲೆಗಳಿಗೆ ದಾಖಲಿಸಲು ಅಗತ್ಯ ಕ್ರಮ ಜರುಗಿಸುವಂತೆ ಸರ್ಕಾರ, ಬಿಬಿಎಂಪಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಬೇಕೆಂದು ಅರ್ಜಿದಾರರ ಕೋರಿಕೆಯಾಗಿದೆ.