ಕಲಾಪದ ವೇಳೆ ಯುವ ವಕೀಲ ಪರಿಪರಿಯಾಗಿ ಕ್ಷಮೆಯಾಚಿಸಿದರೂ ಅವರ ಜೊತೆ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ತಾರ್ಲಾಡ ರಾಜಶೇಖರ್ ರಾವ್ ಅವರು ನಡೆದುಕೊಂಡ ಬರೆಯನ್ನು ಬೆಂಗಳೂರು ವಕೀಲರ ಸಂಘ ತೀವ್ರವಾಗಿ ಖಂಡಿಸಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪತ್ರ ಬರೆದಿದೆ.
“ಘಟನೆಯು ನ್ಯಾಯಾಂಗದೊಳಗಿನ ಮನೋಧರ್ಮ ಮತ್ತು ಹೊಣೆಗಾರಿಕೆಯ ಬಗ್ಗೆ ಗಂಭೀರ ಕಳವಳ ಉಂಟು ಮಾಡಿದೆ. ಆಂಧ್ರ ಪ್ರದೇಶ ನ್ಯಾ. ರಾಜಶೇಖರ್ ರಾವ್ ಅವರು ಯುವ ವಕೀಲನೊಂದಿಗೆ ನಡೆದುಕೊಂಡಿರುವ ರೀತಿಯು ತೀವ್ರ ಆಘಾತ ಮತ್ತು ವೇದನೆ ಉಂಟು ಮಾಡಿದೆ” ಎಂದು ಎಎಬಿ ಪದಾಧಿಕಾರಿಗಳು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
"ನ್ಯಾಯಾಧೀಶರ ಮುಂದೆ ನಡೆದದ್ದು, ವಿಶೇಷವಾಗಿ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಯುವ ವಕೀಲರನ್ನು ಬಂಧಿಸುವ ಬೆದರಿಕೆ, ನ್ಯಾಯ ವಿತರಣಾ ವ್ಯವಸ್ಥೆಯ ಅಣಕಕ್ಕಿಂತ ಕಡಿಮೆಯಿಲ್ಲ. ವಕೀಲರನ್ನು ಬೆದರಿಸುವ ಬದಲು, ಯುವ ವಕೀಲರು ಧೈರ್ಯ, ನಿರ್ಭೀತ ಮತ್ತು ಸ್ವತಂತ್ರರಾಗಿ ವಾದಿಸಲು ಪ್ರೋತ್ಸಾಹಿಸುವಷ್ಟು ವ್ಯವಸ್ಥೆಯು ಬಲಿಷ್ಠವಾಗಿರಬೇಕು. ಆಗ ಮಾತ್ರ ನ್ಯಾಯ ವ್ಯವಸ್ಥೆಯು ನಿಜವಾಗಿಯೂ ನ್ಯಾಯಯುತ, ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿ ಉಳಿಯಲು ಸಾಧ್ಯ" ಎಂದು ಹೇಳಲಾಗಿದೆ.
“ನ್ಯಾಯಾಂಗದ ಸದಸ್ಯರಲ್ಲಿ ವಿಪರೀತ ದುರಹಂಕಾರದ ನಿದರ್ಶನಗಳನ್ನು ನಾವು ಅಪರೂಪದ ಸಂದರ್ಭಗಳಲ್ಲಿ ಕಾಣುತ್ತೇವೆ, ಇದನ್ನು ಸಾಂಸ್ಥಿಕವಾಗಿ ಪರಿಹರಿಸಬೇಕು, ಏಕೆಂದರೆ ದುರಹಂಕಾರವು ನ್ಯಾಯದ ಅವಶ್ಯಕತೆಗಳಿಗೆ ಕುರುಡಾಗಿಸುತ್ತದೆ” ಎಂದು ಹೇಳಲಾಗಿದೆ. ಈ ದುರ್ಘಟನೆಯ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಇಂಥ ಘಟನೆ ಮರುಕಳಿಸುವುದನ್ನು ತಡೆಯಲು ಸಾಂಸ್ಥಿಕ ಸುರಕ್ಷತೆ ಅಗತ್ಯ ಎಂದು ವಾದಿಸಿದೆ.
ವಕೀಲರ ಆತ್ಮಗೌರವ ಕಳೆಯುವುದು ಎಂದರೆ ಅವರ ಅವರ ಆತ್ಮ ಕಳಚಿದಂತೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್ ವಿ ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ ಎಸ್ ಗಿರೀಶ್ ಕುಮಾರ್ ಮತ್ತು ಖಜಾಂಚಿ ಶ್ವೇತಾ ರವಿಶಂಕರ್ ಹೇಳಿದ್ದಾರೆ.