ಕ್ಷುದ್ರ ನಂಬಿಕೆ ಮತ್ತು ಮೌಢ್ಯ ಹರಡಲು ಮೊಬೈಲ್ ಫೋನ್‌ಗಳಂತಹ ಆಧುನಿಕ ಸಾಧನಗಳು ಹಾಗೂ ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ ಎಂದು ಕೇರಳದ ನ್ಯಾಯಾಲಯವೊಂದು ಗುರುವಾರ ಅಭಿಪ್ರಾಯಪಟ್ಟಿದೆ.
ಇಡೀ ದೇಶವನ್ನು ತಲ್ಲಣಗೊಳಿಸಿದ ಕೇರಳ ನರಬಲಿ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಿದ ಆದೇಶದಲ್ಲಿ ಎರ್ನಾಕುಲಂನ ಜೆಎಫ್‌ಸಿ ನ್ಯಾಯಾಧೀಶ ಎಲ್ಡೋಸ್ ಮ್ಯಾಥ್ಯೂ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎನ್ನುವುದು ಸಂವಿಧಾನದ ಆಶಯವಾದರೂ ನರಬಲಿಯಂತಹ ವಿಧ್ವಂಸಕ ಕೃತ್ಯಗಳು ಸಮಾಜದ ಪ್ರಗತಿಗೆ ಮಾರಕ ಎಂದು ನ್ಯಾಯಾಲಯ ತಿಳಿಸಿದೆ.
"ಇತ್ತೀಚೆಗೆ ಕೇರಳದಲ್ಲಿ ನಡೆದಿದೆ ಎನ್ನಲಾದ ಘಟನೆ ಹೋಲಿಸಲು ಅಸಾಧ್ಯವಾದುದಾಗಿದ್ದು ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿದೆ. ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎನ್ನುವುದು ಸಂವಿಧಾನದ ಆಶಯವಾದರೂ ಫೇಸ್‌ಬುಕ್, ಮೊಬೈಲ್ ಫೋನ್, ಯೂಟ್ಯೂಬ್‌ನಂತಹ ಆಧುನಿಕ ವೈಜ್ಞಾನಿಕ ಮಾಧ್ಯಮಗಳನ್ನು ಕ್ಷುದ್ರ ನಂಬಿಕೆ, ಮೌಢ್ಯ, ಕಂದಾಚಾರ ಇತ್ಯಾದಿಗಳನ್ನು ಹರಡಲು ಬಳಸಲಾಗುತ್ತಿದೆ. ಪರಿಣಾಮ ನಮ್ಮ ಸಮಾಜವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿ ಮತ್ತು ಅಭಿವೃದ್ಧಿಯತ್ತ ಒಯ್ಯುತ್ತಿರುವಾಗ ಪ್ರತಿಗಾಮಿ ಕೃತ್ಯಗಳು ಸಮಾಜವನ್ನು ಹಿಂದಕ್ಕೆ ಕರೆದೊಯ್ಯುತ್ತಿವೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ. ನ್ಯಾಯಾಲಯ ಆರೋಪಿಗಳನ್ನು ಅ. 24ರವರೆಗೆ ಪೊಲೀಸ್ ವಶಕ್ಕೆ ನೀಡಿದೆ.