ಸುದ್ದಿಗಳು

ಮೋದಿ ಸರ್ಕಾರ ಸಂವಿಧಾನದ ಅನುಸಾರವೇ ದೇಶ ನಡೆಸುತ್ತದೆ; ನ್ಯಾಯಾಂಗದ ಮೇಲೆ ಸವಾರಿ ಮಾಡುವ ಪ್ರಶ್ನೆಯೇ ಇಲ್ಲ: ಸಚಿವ ರಿಜಿಜು

"ಕೆಲವರಿಗೆ ಬದ್ಧತೆಯುಳ್ಳ ನ್ಯಾಯಾಂಗ ಎಂದರೆ ಅಧಿಕಾರಿಗಳಿಗೆ ಬದ್ಧರಾಗಿರುವುದು. ಆದರೆ ನಮಗೆ ಬದ್ಧತೆ ಎನ್ನುವುದು ರಾಷ್ಟ್ರಕ್ಕೆ ಬದ್ಧರಾಗಿರುವುದಾಗಿದೆ" ಎಂದು ಹೇಳಿದ ಕೇಂದ್ರ ಕಾನೂನು ಸಚಿವರು.

Bar & Bench

ಪ್ರಧಾನಿ ನರೇಂದ್ರ ಮೋದಿ ಮೋದಿ ಸರ್ಕಾರ ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂಬ ವಿರೋಧಪಕ್ಷಗಳ ಟೀಕೆಯ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹರಿಹಾಯ್ದಿದ್ದಾರೆ.

ಆರ್‌ಎಸ್‌ಎಸ್‌ನ ಕಾನೂನು ಘಟಕವಾದ ಅಖಿಲ ಭಾರತೀಯ ಅಧಿವಕ್ತ ಪರಿಷತ್‌ ಹರ್ಯಾಣದ ಕುರುಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 16ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ʼಭಾರತೀಯ ನ್ಯಾಯಾಂಗ ವ್ಯವಸ್ತೆ ಮುಂದಿರುವ ಹೊಸ ಸವಾಲುಗಳು ಮತ್ತು ಅವಕಾಶಗಳು” ಎಂಬ ವಿಷಯದ ಕುರಿತಂತೆ ಅವರ ಮಾತನಾಡಿದರು.

ಮೋದಿ ಸರ್ಕಾರ ಸಂವಿಧಾನದ ಪ್ರಕಾರ ದೇಶ ನಡೆಸುತ್ತಿದ್ದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು.

ಸಚಿವರ ಮಾತಿನ ಪ್ರಮುಖಾಂಶಗಳು

  • ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಬಗ್ಗೆ ನಾವು ಯೋಚಿಸಲೂ ಸಾಧ್ಯವಿಲ್ಲ. ಸಂವಿಧಾನದ ಪ್ರಕಾರ ದೇಶ ನಡೆಸುವುದಾಗಿ ಮೋದಿ ಅವರು ಹೇಳಿರುವಾಗ ಅದು ಹಾಗೆಯೇ ನಡೆಯಲಿದ್ದು ಅದರಲ್ಲಿ ಎರಡು ಮಾತಿಲ್ಲ.

  • ನ್ಯಾಯಾಲಯಗಳ ಸ್ವಾತಂತ್ರ್ಯಕ್ಕೆ ಕೇಂದ್ರ ಸರ್ಕಾರ ಧಕ್ಕೆ ತರುತ್ತಿದೆ ಎಂದು ಬಿಂಬಿಸಲು  ಕೆಲ ವಿರೋಧ ಪಕ್ಷಗಳು ಯತ್ನಿಸುತ್ತಿದ್ದರೂ ನ್ಯಾಯಾಂಗವನ್ನು ಬಲಪಡಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

  • ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಘರ್ಷಣೆ ಇದ್ದು ಸರ್ಕಾರ ನ್ಯಾಯಾಂಗವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂಬ ಮಾತನ್ನು ಕೇಳಿರಬಹುದು. ಕೆಲ ರಾಜಕೀಯ ಪಕ್ಷಗಳು ಇಂತಹ ಹೇಳಿಕೆ ನೀಡುತ್ತಿದ್ದು ಕೆಲವೊಮ್ಮೆ ವಾರ್ತಾ ವಾಹಿನಿಗಳು ಸುದ್ದಿಯಲ್ಲಿ ಮಸಾಲೆ ಬೆರೆಸಲು ಹೀಗೆ ಮಾಡುತ್ತಿವೆ. ಆದರೆ ಪ್ರಧಾನ ಮೋದಿ ಅವರು ಸಂವಿಧಾನವು ಅತ್ಯಂತ ಪವಿತ್ರ ಗ್ರಂಥವಾಗಿದ್ದು, ದೇಶ ಸಂವಿಧಾನದ ಪ್ರಕಾರ ನಡೆಯುತ್ತದೆ ಎಂದು ಸದಾ ಹೇಳುತ್ತಾರೆ.

  • ಅನೇಕ ವರ್ಷಗಳ ಹಿಂದೆ ನ್ಯಾಯಮೂರ್ತಿಗಳ ಹಿರಿತನವನ್ನು ಉಲ್ಲಂಘಿಸಲಾಗುತ್ತಿದೆ ಎನ್ನಲಾಗುತ್ತಿತ್ತು. ನ್ಯಾಯಾಂಗ ಬದ್ಧತೆಯ ಕುರಿತು ಚರ್ಚೆ ನಡೆಯುತ್ತಿತ್ತು, ಕಾರ್ಯಾಂಗದ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ನ್ಯಾಯಮೂರ್ತಿಗಳು ಕೆಲಸ ಮಾಡಬೇಕು ಎನ್ನಲಾಗುತ್ತಿತ್ತು. ಆದರೆ ಈ ಸರ್ಕಾರಕ್ಕೆ ನ್ಯಾಯಾಧೀಶರು ದೇಶಕ್ಕೆ ಬದ್ಧವಾಗಿರಬೇಕೆ ವಿನಾ ಕಾರ್ಯಾಂಗಕ್ಕಲ್ಲ. ಕೆಲವರಿಗೆ ಬದ್ಧತೆಯುಳ್ಳ ನ್ಯಾಯಾಂಗ ಎಂದರೆ ಅಧಿಕಾರಿಗಳಿಗೆ ಬದ್ಧರಾಗಿರುವುದು. ಆದರೆ ನಮಗೆ ಬದ್ಧತೆ ಎನ್ನುವುದು ರಾಷ್ಟ್ರಕ್ಕೆ ಬದ್ಧರಾಗಿರುವುದಾಗಿದೆ.

  • ಸಮ್ಮೇಳನವೊಂದರಲ್ಲಿ ನಾನು ಹೇಳಿದ್ದು ನೆನಪಾಗುತ್ತಿದೆ. ಪ್ರತಿ  5 ವರ್ಷಗಳಿಗೊಮ್ಮೆ ನಾವು (ಶಾಸನ ರೂಪಿಸುವವರು) ಜನರೆದುರು ನಮ್ಮ ಕೆಲಸವನ್ನು ಒರೆಗೆ ಹಚ್ಚಬೇಕು. ಆದರೆ ನ್ಯಾಯಮೂರ್ತಿಗಳನ್ನು ಯಾರೂ ಆಯ್ಕೆ ಮಾಡುವುದಿಲ್ಲ. ಅವರು ಅವರದೇ ಆದ ವ್ಯವಸ್ಥೆಯಿಂದಾಗಿ ಇಲ್ಲಿದ್ದಾರೆ. ನ್ಯಾಯಮೂರ್ತಿಗಳು ಏನೇ ಮಾಡಿದರೂ ಅದು ಸಾರ್ವಜನಿಕರ ಮತಗಳೆದುರು ಪರೀಕ್ಷೆಗೊಳಪಡುವುದಿಲ್ಲ. ಆದರೆ ವಾಸ್ತವವಾಗಿ ಸಾರ್ವಜನಿಕ ಪರಿಶೀಲನೆ ಎಂಬುದಿದೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ನ್ಯಾಯಾಂಗದಲ್ಲಿ ಕೆಲಸ ಮಾಡುವವರು ಸಹ ತಾವು ಕೂಡ ಒಂದಿಲ್ಲೊಂದು ಬಗೆಯಲ್ಲಿ ಜನರಿಗೆ ಉತ್ತರದಾಯಿಗಳು ಎಂದು ತಿಳಿಯಬೇಕು.

  • ಕಾರ್ಯಾಂಗ ತನ್ನ ಎಲ್ಲೆ ಮೀರುವುದಿಲ್ಲ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಾವು ತಪ್ಪಿಯೂ ಹಾಗೆ ಮಾಡುವುದಿಲ್ಲ. ನ್ಯಾಯಾಂಗ ತನ್ನ ಸಾಂವಿಧಾನಿಕ ಮಿತಿಯೊಳಗೆ ಇದ್ದರೆ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಘರ್ಷಣೆ ಬಗ್ಗೆ ಸುದ್ದಿ ಮಾಧ್ಯಮಗಳಿಗೆ ಮಸಾಲೆ ಸಿಗುವುದಿಲ್ಲ.