Justice Hemant Chandangoudar 
ಸುದ್ದಿಗಳು

ಹ್ಯಾರಿಸ್‌-ನಲಪಾಡ್‌ ಒಡೆತನದ ಶಿಕ್ಷಣ ಸಂಸ್ಥೆ ತೆರವು: ಬಿಬಿಎಂಪಿಗೆ ನಿರ್ಬಂಧ ವಿಧಿಸಿದ ಹೈಕೋರ್ಟ್‌

ಬೆಂಗಳೂರು ದಕ್ಷಿಣ ತಾಲ್ಲೂಕಿನ ವರ್ತೂರು ಹೋಬಳಿಯ ಛಲ್ಲಘಟ್ಟ ಗ್ರಾಮದಲ್ಲಿನ ಸರ್ವೆ ನಂ. 70 (14ಎ)ರಲ್ಲಿ ರಾಜಕಾಲುವೆ ಇದೆ ಎಂಬುದು 2015ರ ಮಾಸ್ಟರ್‌ ಪ್ಲಾನ್‌ನಲ್ಲಿ ಉಲ್ಲೇಖವಾಗಿಲ್ಲ ಎಂದು ವಾದಿಸಿರುವ ಅರ್ಜಿದಾರರು.

Bar & Bench

ಕಾಂಗ್ರೆಸ್‌ ಶಾಸಕ ಎನ್‌ ಎ ಹ್ಯಾರಿಸ್‌ ಹಾಗೂ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಒಡೆತನದ ಎನ್‌ ಎ ಮೊಹಮ್ಮದ್‌ ಸೆಂಟರ್‌ ಫಾರ್‌ ಎಜುಕೇಶನ್‌ಗೆ ಸೇರಿದ ವಿವಾದದ ಕೇಂದ್ರವಾಗಿರುವ ಆಸ್ತಿಯನ್ನು ಮುಂದಿನ ಆದೇಶದವರೆಗೆ ತೆರವು ಮಾಡದಂತೆ ಕರ್ನಾಟಕ ಹೈಕೋರ್ಟ್‌ ಬುಧವಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಿದೆ.

ರಾಜಕಾಲುವೆ ತೆರವು, ಒತ್ತುವರಿ ತೆರವು ಭಾಗವಾಗಿ ನಡೆಸುತ್ತಿರುವ ಕಾರ್ಯಾಚರಣೆಗೆ ಆಕ್ಷೇಪಿಸಿ ಎನ್‌ ಎ ಮೊಹಮ್ಮದ್‌ ಸೆಂಟರ್‌ ಫಾರ್‌ ಎಜುಕೇಶನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಮುಂದಿನ ವಿಚಾರಣೆಯವರೆಗೆ ವಿವಾದದ ಕೇಂದ್ರವಾಗಿರುವ ಆಸ್ತಿ ತೆರವು ಮಾಡದಂತೆ ಬಿಬಿಎಂಪಿಗೆ ನಿರ್ದೇಶಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ. ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್‌ 16ಕ್ಕೆ ಮುಂದೂಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಬೆಂಗಳೂರು ದಕ್ಷಿಣ ತಾಲ್ಲೂಕಿನ ವರ್ತೂರು ಹೋಬಳಿಯ ಛಲ್ಲಘಟ್ಟ ಗ್ರಾಮದಲ್ಲಿನ ಸರ್ವೆ ನಂ. 70 (14ಎ)ರಲ್ಲಿ ರಾಜಕಾಲುವೆ ಇದೆ ಎಂಬುದು 2015ರ ಮಾಸ್ಟರ್‌ ಪ್ಲಾನ್‌ನಲ್ಲಿ ಉಲ್ಲೇಖವಾಗಿಲ್ಲ. ಅದಾಗ್ಯೂ, ಪ್ರತಿವಾದಿಯಾಗಿರುವ ಬಿಬಿಎಂಪಿಯು ನೋಟಿಸ್‌ ಜಾರಿ ಮಾಡದೇ ವಿವಾದದ ಕೇಂದ್ರವಾಗಿರುವ ಆಸ್ತಿಯನ್ನು ತೆರವು ಮಾಡುತ್ತಿದೆ. ಇದು ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆಯಾಗಿದೆ” ಎಂದು ಪೀಠದ ಗಮನಸೆಳೆದರು. ಇದನ್ನು ಪರಿಗಣಿಸಿದ ಪೀಠವು ಬಿಬಿಎಂಪಿಗೆ ನಿರ್ಬಂಧ ವಿಧಿಸಿ, ವಿಚಾರಣೆ ಮುಂದೂಡಿದೆ.