Mohammed Zubair, Delhi High Court 
ಸುದ್ದಿಗಳು

ಮೊಹಮ್ಮದ್‌ ಜುಬೈರ್‌ ಬಂಧನ: ಆಕ್ಷೇಪಣೆ ಸಲ್ಲಿಸಲು ದೆಹಲಿ ಪೊಲೀಸ್‌ಗೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್‌

ನಾಲ್ಕು ವಾರಗಳಲ್ಲಿ ಪ್ರತ್ಯುತ್ತರ ಅಫಿಡವಿಟ್‌ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದ ನ್ಯಾಯಮೂರ್ತಿ ಸಂಜೀವ್‌ ನರೂಲಾ ನೇತೃತ್ವದ ಏಕಸದಸ್ಯ ಪೀಠ.

Bar & Bench

ಆಲ್ಟ್‌ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಅವರನ್ನು ನಾಲ್ಕು ದಿನಗಳ ಪೊಲೀಸ್‌ ವಶಕ್ಕೆ ನೀಡಿರುವ ಪಟಿಯಾಲಾ ಹೌಸ್‌ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿ ಹೈಕೋರ್ಟ್‌ ದೆಹಲಿ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದೆ.

ಜುಬೈರ್‌ ಲ್ಯಾಪ್‌ಟಾಪ್‌ ಪರಿಶೀಲನೆ ಹಾಗೂ ವಶಪಡಿಸಿಕೊಳ್ಳುವಿಕೆಗೆ ಆದೇಶ ಮಾಡಿದ್ದ ಪಟಿಯಾಲಾ ಹೌಸ್‌ ಕೋರ್ಟ್‌ ಆದೇಶವನ್ನು ಸಹ ಮನವಿಯು ಪ್ರಶ್ನಿಸಿದ್ದು ನ್ಯಾಯಮೂರ್ತಿ ಸಂಜೀವ್‌ ನರುಲಾ ನೇತೃತ್ವದ ಏಕಸದಸ್ಯ ಪೀಠವು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ದೆಹಲಿ ಪೊಲೀಸರಿಗೆ ಆದೇಶ ಮಾಡಿದೆ.

“ವಾದವನ್ನು ಪರಿಗಣಿಸಿ, ಪ್ರತಿಕ್ರಿಯೆ ಸಲ್ಲಿಸಲು ಆದೇಶಿಸಲಾಗಿದೆ. ಎರಡು ವಾರಗಳಲ್ಲಿ ಪ್ರತಿವಾದಿಗಳು ಪ್ರತ್ಯುತ್ತರ ಅಫಿಡವಿಟ್‌ ಸಲ್ಲಿಸಬೇಕು. ಅಲ್ಲಿಂದ ಮುಂದಕ್ಕೆ ಒಂದು ವಾರದಲ್ಲಿ ಅರ್ಜಿದಾರರು ಅದಕ್ಕೆ ಪ್ರತ್ಯುತ್ತರ ಸಲ್ಲಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ರಿಮ್ಯಾಂಡ್‌ ಮನವಿಯನ್ನು ಜುಬೈರ್‌ ಅವರಿಗೆ ನೀಡುವಂತೆ ದೆಹಲಿ ಪೊಲೀಸರಿಗೆ ನ್ಯಾಯಾಲಯ ಆದೇಶ ಮಾಡಿದೆ. ಹೈಕೋರ್ಟ್‌ ಆದೇಶದಿಂದ ಪೂರ್ವಾಗ್ರಹಕ್ಕೆ ಒಳಗಾಗದೇ ಮ್ಯಾಜಿಸ್ಟ್ರೇಟ್‌ ಪ್ರಕರಣವನ್ನು ನಿರ್ಧರಿಸಲಿದ್ದಾರೆ ಎಂದು ಏಕಸದಸ್ಯ ಪೀಠವು ಸ್ಪಷ್ಟಪಡಿಸಿದೆ. ಜುಲೈ 27ಕ್ಕೆ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.

ಪಟಿಯಾಲ ಹೌಸ್‌ ಕೋರ್ಟ್‌ ಜೂನ್‌ 28ರಂದು ಜುಬೈರ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ ಮಾಡಿದ್ದನ್ನು ಇಲ್ಲಿ ನೆನೆಯಬಹುದು.