Mohammed Zubair
Mohammed Zubair 
ಸುದ್ದಿಗಳು

ಮೊಹಮ್ಮದ್‌ ಜುಬೈರ್‌ ಅವರನ್ನು ನಾಲ್ಕು ದಿನ ಪೊಲೀಸ್‌ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ

Bar & Bench

ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತಿದ ಆರೋಪದ ಮೇಲೆ ಸುಳ್ಳು ಸುದ್ದಿಗಳನ್ನು ಬೆಳಕಿಗೆ ತರುವ ಜಾಲತಾಣ ʼಆಲ್ಟ್ ನ್ಯೂಸ್ʼನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರನ್ನು ದೆಹಲಿ ನ್ಯಾಯಾಲಯವು ಮಂಗಳವಾರ ನಾಲ್ಕು ದಿನಗಳ ಮಟ್ಟಿಗೆ ಪೊಲೀಸ್‌ ವಶಕ್ಕೆ ನೀಡಿದೆ.

ಜುಬೈರ್‌ ಅವರು ಪೊಲೀಸ್‌ ತನಿಖೆಗೆ ಸಹಕರಿಸಿಲ್ಲ. ಜುಬೈರ್‌ ಫೋನ್‌ ಮತ್ತು ಲ್ಯಾಪ್‌ಟಾಪ್‌ ಪಡೆಯಲು ಅವರನ್ನು ಬೆಂಗಳೂರಿಗೆ ಕರೆದೊಯ್ಯಬೇಕಿದೆ ಎಂದು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸ್ನಿಗ್ಧಾ ಸರ್ವರಿಯಾ ಅವರು ಆದೇಶದಲ್ಲಿ ಹೇಳಿದ್ದಾರೆ.

“ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ಆರೋಪಿಗೆ ನೋಟಿಸ್‌ ನೀಡಲಾಗಿದ್ದು, ಅದು ಪೊಲೀಸ್‌ ದಾಖಲೆಯ ಭಾಗವಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಆಕ್ಷೇಪಾರ್ಹವಾದ ಟ್ವೀಟ್‌ನಲ್ಲಿ ಬಳಸಿರುವ ಚಿತ್ರವು 1983ರಲ್ಲಿ ತೆರೆಕಂಡಿದ್ದ “ಕಿಸ್ಸಿ ಸೆ ನಾ ಕೇಹ್ನಾ” ಚಿತ್ರದ ಭಾಗವಾಗಿತ್ತು ಎಂಬ ವಾದವು ಈ ಹಂತದಲ್ಲಿ ಆರೋಪಿಯ ನೆರವಿಗೆ ಬರುವುದಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

Complaint via Twitter by Hanuman Bhakt

ದೆಹಲಿ ಪೊಲೀಸರು ಜುಬೈರ್‌ ಅವರನ್ನು ಸೋಮವಾರ ಬಂಧಿಸಿದ್ದು, ಡ್ಯೂಟಿ ಮ್ಯಾಜಿಸ್ಟ್ರೇಟ್‌ ಅವರು ಜುಬೈರ್‌ ಅವರನ್ನು ಒಂದು ದಿನದ ಮಟ್ಟಿಗೆ ಪೊಲೀಸರ ವಶಕ್ಕೆ ನೀಡಿದ್ದರು. ಇಂದು ಜುಬೈರ್‌ ಅವರನ್ನು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸ್ನಿಗ್ಧಾ ಸರ್ವರಿಯಾ ಮುಂದೆ ಹಾಜರುಪಡಿಸಲಾಗಿತ್ತು.

ಈ ವೇಳೆ ಜುಬೈರ್‌ ಪರ ವಕೀಲೆ ವೃಂದಾ ಗ್ರೋವರ್‌ ಅವರು, ಜುಬೈರ್‌ ಟ್ವೀಟ್‌ ಮಾಡಿರುವ ಚಿತ್ರ 1983ರ ಕಿಸೀ ಸೆ ನಾ ಕೆಹನಾ ಚಲನಚಿತ್ರದ್ದು. ಈ ಚಿತ್ರವು ಅನೇಕರ ಟ್ವೀಟ್‌ಗಳಲ್ಲಿದೆ. ಬಂಧಿಸಲು ತೋರಿಸಿರುವ ಈ ಚಿತ್ರವು ಹಿಂದಿ ಸಿನಿಮಾದ್ದಾಗಿದೆ. ಈ ಚಿತ್ರವನ್ನು ನಿಷೇಧಿಸಿರಲಿಲ್ಲ. ಎಲ್ಲರೂ ಇದನ್ನು ನೋಡಿದ್ದರು ಎಂದು ವಾದಿಸಿದರು.

ಅನೇಕರು ಇದನ್ನು ಟ್ವೀಟ್ ಮಾಡಿದ್ದರೂ ಸಹ ನನ್ನ ಕಕ್ಷೀದಾರರನ್ನು ಮಾತ್ರವೇ ಗುರಿಯಾಗಿಸಿಕೊಳ್ಳಲಾಗಿದೆ. ಅವರು ಬಲಿಷ್ಠ ವ್ಯಕ್ತಿಗಳಿಗೆ ಸವಾಲು ಒಡ್ಡಿರಬಹುದು, ಅದರೆ ಇದುವೇ ಅವರಿಗೆ ಕಿರುಕುಳ ನೀಡಲು ಕಾರಣವಾಗಬಾರದು ಎಂದು ವಿವರಿಸಿದರು.

ಮುಂದುವರೆದು, ಪೊಲೀಸರು ತನಿಖೆಗಾಗಿ ಲ್ಯಾಪ್‌ಟಾಪ್‌ ಕೇಳುತ್ತಿದ್ದಾರೆ. ಆದರೆ, ಅದರಲ್ಲಿ ವೈಯಕ್ತಿಕ ಮಾಹಿತಿ ಇದೆ. ಕಕ್ಷಿದಾರರು ಪತ್ರಕರ್ತರು. ಪತ್ರಕರ್ತರ ಬಳಿ ಸೂಕ್ಷ್ಮ ಮಾಹಿತಿ ಇರುತ್ತವೆ ಎಂದು ಲ್ಯಾಪ್‌ಟಾಪ್ ಅನ್ನು ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲವೆಂದು ಪ್ರತಿಪಾದಿಸಲು ಮುಂದಾದರು. ಆದರೆ, ನ್ಯಾಯಾಲಯವು ಇದಾವುದನ್ನೂ ಈ ಹಂತದಲ್ಲಿ ಪರಿಗಣಿಸಲಿಲ್ಲ.

ಜುಬೈರ್ ಅವರ 2018ರಲ್ಲಿ ಮಾಡಿದ್ದ ಒಂದು ಟ್ವೀಟ್‌ಗಾಗಿ ಐಪಿಸಿ ಸೆಕ್ಷನ್ 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು) ಮತ್ತು 295 ಎ (ಧಾರ್ಮಿಕ ಭಾವನೆಗಳ ನಿಂದನೆ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ನಿರ್ದಿಷ್ಟ ಧರ್ಮದ ದೇವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಸಲುವಾಗಿ ಜುಬೈರ್ ಆಕ್ಷೇಪಾರ್ಹ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ ಎಂದು ಟ್ವಿಟರ್ ಖಾತೆದಾರರೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ಜುಬೈರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.