ಸುದ್ದಿಗಳು

ಮಂಗಗಳ ಹಾವಳಿ: ನಿರ್ದಿಷ್ಟ ಕಾರ್ಯಾಚರಣೆ ವಿಧಾನ ಜಾರಿಗೆ ಸ್ಥಳೀಯ ಸಂಸ್ಥೆಗಳಿಗೆ ಹೈಕೋರ್ಟ್‌ ನಿರ್ದೇಶನ, ಅರ್ಜಿ ಇತ್ಯರ್ಥ

ಮಂಗಗಳ ಹಾವಳಿ ತಡೆ ಸಂಬಂಧ ಸ್ಪಷ್ಟ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಅದರಲ್ಲಿ ಅರಣ್ಯ ಇಲಾಖೆ ಹೇಗೆ ಮಂಗಗಳನ್ನು ಹಿಡಿಯಬೇಕು ಮತ್ತು ಆನಂತರ ಹೇಗೆ ಅವುಗಳನ್ನು ಸ್ಥಳಾಂತರ ಮಾಡಬೇಕು ಎಂಬುದನ್ನು ವಿವರಿಸಲಾಗಿದೆ ಎಂದ ಪೀಠ.

Bar & Bench

ರಾಜ್ಯದ ಹಲವು ನಗರ-ಪಟ್ಟಣಗಳಲ್ಲಿರುವ ಮಂಗಗಳ ಹಾವಳಿ ನಿಯಂತ್ರಿಸಲು ಆಯಾ ನಗರ ಸ್ಥಳೀಯ ಸಂಸ್ಥೆಗಳು ರಾಜ್ಯ ಸರ್ಕಾರ ರೂಪಿಸಿರುವ ಮಂಗಗಳನ್ನು ಸೆರೆಹಿಡಿಯುವ ಮತ್ತು ಪುನರ್ ವಸತಿ ಕಲ್ಪಿಸುವ ಕುರಿತಾದ ನಿರ್ದಿಷ್ಟ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದ್ದು, ಅರ್ಜಿ ವಿಲೇವಾರಿ ಮಾಡಿದೆ.

ಹಾಸನ ಜಿಲ್ಲೆಯ ಬೇಲೂರು ಬಳಿ ಕಳೆದ ವರ್ಷ ನಡೆದ ಮಂಗಗಳ ಮಾರಣ ಹೋಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಗೆ ನಡೆಸಿತು.

ಮಂಗಗಳ ನಿಯಂತ್ರಣ ಅಥವಾ ಹಾವಳಿ ತಡೆ ಸಂಬಂಧ ಸ್ಪಷ್ಟ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಅದರಲ್ಲಿ ಅರಣ್ಯ ಇಲಾಖೆ ಹೇಗೆ ಮಂಗಗಳನ್ನು ಹಿಡಿಯಬೇಕು ಮತ್ತು ಆನಂತರ ಹೇಗೆ ಅವುಗಳನ್ನು ಸ್ಥಳಾಂತರ ಮಾಡಬೇಕು ಎಂಬುದನ್ನು ವಿವರಿಸಲಾಗಿದೆ. ಅದಕ್ಕಾಗಿ ವೆಬ್‌ಸೈಟ್‌ ಅನ್ನು ಕೂಡ ಆರಂಭಿಸಲಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ರಾಜ್ಯ ಸರ್ಕಾರ ರೂಪಿಸಿರುವ ಎಸ್‌ಒಪಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಆದ್ದರಿಂದ, ಅರಣ್ಯ ಇಲಾಖೆ ಅಥವಾ ಬಿಬಿಎಂಪಿ ಅಥವಾ ನಗರ ಸ್ಥಳೀಯ ಸಂಸ್ಥೆಗಳು ಮಂಗಗಳ ಹಾವಳಿ ತಡೆಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2021ರ ಆಗಸ್ಟ್‌ನಲ್ಲಿ ಹಾಸನ ಜಿಲ್ಲೆಯ ಅರೆಹಳ್ಳಿ ಹೋಬಳಿ ಬಳಿಯ ಚೌಡೇನಹಳ್ಳಿಯಲ್ಲಿ 38 ಮಂಗಗಳನ್ನು ಕೊಂದು ಅವುಗಳನ್ನು ಗೋಣಿ ಚೀಲದಲ್ಲಿ ಹಾಕಲಾಗಿತ್ತು. ಆ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ನ್ಯಾಯಾಲಯ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡು ಇದು ಮೇಲ್ನೋಟಕ್ಕೆ 1960ರ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿತ್ತು. ಜೊತೆಗೆ ಬೆಂಗಳೂರು ನಗರದಲ್ಲಿನ ಕೋತಿಗಳ ಉಪಟಳದ ಬಗ್ಗೆ ವಕೀಲ ಬಿ ಎಸ್ ರಾಧಾನಂದನ್ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರು ಮಹಾನಗರದಲ್ಲಿನ ಮಂಗಗಳ ಹಾವಳಿ ಮತ್ತು ಬೇಲೂರಿನಲ್ಲಿ ನಡೆದ ಮಂಗಗಳ ಮಾರಣ ಹೋಮದ ಹಿನ್ನೆಲೆಯಲ್ಲಿ ಅತ್ತ ಮಂಗಗಳಿಂದ ಜನರಿಗೆ ಆಗುವ ಉಪಟಳವೂ ನಿಲ್ಲಬೇಕು. ಇತ್ತ ಅವುಗಳನ್ನು ಹಿಡಿಯುವುದು, ಸ್ಥಳಾಂತರ ಮತ್ತು ಪುನರ್ ವಸತಿ ಕಲ್ಪಿಸುವ ಕುರಿತು ಸ್ಪಷ್ಟ ನೀತಿ ರೂಪಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ವೇಳೆ ನ್ಯಾಯಾಲಯವು ಸುಪ್ರೀಂ ಕೋರ್ಟ್ 2018ರಲ್ಲಿ ಮಂಗಗಳಿಗೂ ಜೀವಿಸುವ ಹಕ್ಕಿದೆ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಎ ನಾಗರಾಜು ನಡುವಿನ ಪ್ರಕರಣದಲ್ಲಿ ನೀಡಿದ್ದ ತೀರ್ಪು ಪಾಲನೆ ಮಾಡುವಂತೆ ಪೀಠವು ನಿರ್ದೇಶನ ನೀಡಿತ್ತು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಸರ್ಕಾರದ ನಾನಾ ಇಲಾಖೆಗಳು ಸೇರಿ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ಮಂಗಗಳ ಹಾವಳಿ ನಿಯಂತ್ರಣಕ್ಕೆ ಸ್ಪಷ್ಟ ಮಾರ್ಗಸೂಚಿ ರೂಪಿಸಲಾಗಿದೆ.