Morbi Bridge collapse  
ಸುದ್ದಿಗಳು

ಮೋರ್ಬಿ ಸೇತುವೆ ಕುಸಿತ: ಕಾನೂನು ಲೋಕದ ಇದುವರೆಗಿನ ಬೆಳವಣಿಗೆಗಳು

ದುರಂತಕ್ಕೆ ಕಾರಣರಾದವರನ್ನು ಬಂಧಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಿರುವಂತೆಯೇ ಕಳೆದೆರಡು ದಿನಗಳಲ್ಲಿ ಕೆಲವು ಮಹತ್ವದ ಕಾನೂನು ಬೆಳವಣಿಗೆಗಳು ಘಟಿಸಿವೆ.

Bar & Bench

ಗುಜರಾತ್‌ನ ಮೋರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ʼಜುಲ್ಟು ಪುಲ್ʼ ಹೆಸರಿನ 141 ವರ್ಷದ ತೂಗು ಸೇತುವೆ ಖಾಸಗಿ ನಿರ್ವಾಹಕರಾದ ಒರೆವಾ ಗ್ರೂಪ್ ದುರಸ್ತಿ ಕಾಮಗಾರಿ ಬಳಿಕ ಅಂದರೆ ಅಕ್ಟೋಬರ್ 30ರಂದು ಕುಸಿದುಬಿದ್ದು ನೂರಾರು ಜನ ಸಾವನ್ನಪ್ಪಿದ್ದರು. ಸಾರ್ವಜನಿಕರ ಓಡಾಟಕ್ಕೆ ಮುಕ್ತವಾದ ನಾಲ್ಕೇ ದಿನಗಳಲ್ಲಿ ಸೇತುವೆ ಕುಸಿದಿತ್ತು.

ದುರಂತಕ್ಕೆ ಕಾರಣರಾದವರನ್ನು ಬಂಧಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಿರುವಂತೆಯೇ ಕಳೆದೆರಡು ದಿನಗಳಲ್ಲಿ ಕೆಲವು ಮಹತ್ವದ ಕಾನೂನು ಬೆಳವಣಿಗೆಗಳು ನಡೆದಿವೆ.  ಅವುಗಳ ವಿವರ ಇಂತಿದೆ:

  • ಪ್ರಕರಣದಲ್ಲಿ ಹೆಸರಿಸಲಾದ ಒಟ್ಟು ಒಂಬತ್ತು ಆರೋಪಿಗಳ ಪೈಕಿ ನಾಲ್ವರನ್ನು ನವೆಂಬರ್ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಮೋರ್ಬಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ.

  • “ಆರೋಪಿಗಳ ವಿರುದ್ಧ ಮಾನವ ಹಕ್ಕು ಉಲ್ಲಂಘನೆ ಮಾಡುವಂತಿಲ್ಲ” ಎಂದು ಸೂಚಿಸಿ ನಾಲ್ವರು ಆರೋಪಿಗಳನ್ನು ಪೊಲೀಸ್‌ ವಶಕ್ಕೆ ಒಪ್ಪಿಸಿದ ನ್ಯಾಯಾಧೀಶರಾದ ಮಸ್ರೂರ್‌ ಜಲಿಸ್‌ ಖಾನ್‌.

  • ದುರಸ್ತಿ ಮಾಡಿದ ಸೇತುವೆ ನಾಲ್ಕು ದಿನವೂ ಬಾಳಿಕೆ ಬರಲಿಲ್ಲ. ರಿಪೇರಿ ಜವಾಬ್ದಾರಿ ಹೊತ್ತವರ ನಿರ್ಲಕ್ಷ್ಯ, ಕಳಪೆ ಕಾಮಗಾರಿಯಿಂದಾಗಿ ಅನೇಕರು ಪ್ರಾಣ ಕಳೆದುಕೊಂಡರು ಎಂದು ನ್ಯಾಯಾಲಯ ಅವಲೋಕನ.

  • ಪ್ರಕರಣದ ಆರೋಪಿಗಳ ಪರ ವಾದ ಮಂಡಿಸಲು ಮೋರ್ಬಿ ಮತ್ತು ರಾಜ್‌ಕೋಟ್‌ನ ವಕೀಲರ ಸಂಘಗಳ ನಿರಾಕರಣೆ.

  • 500 ವಕೀಲರಿಂದ ಮೋರ್ಬಿಯಲ್ಲಿ ಬುಧವಾರ ಪ್ರತಿಭಟನೆ.

  •  "ಸೇತುವೆ ಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ನಿನ್ನೆ ಮೆರವಣಿಗೆ ನಡೆಸಿದ್ದೇವೆ. ಅವರ ಕುಟುಂಬಗಳೊಂದಿಗೆ ನಿಲ್ಲುತ್ತೇವೆ. ಹೀಗಾಗಿ ಆರೋಪಿಗಳನ್ನು ಪ್ರತಿನಿಧಿಸುತ್ತಿಲ್ಲ… ಘಟನೆಯಲ್ಲಿ ವಕೀಲರೊಬ್ಬರ ಸಂಬಂಧಿಕರೂ ಪ್ರಾಣ ಕಳೆದುಕೊಂಡಿದ್ದಾರೆ” ಎಂದು ʼಬಾರ್‌ ಅಂಡ್‌ ಬೆಂಚ್‌ʼಗೆ ಪ್ರತಿಕ್ರಿಯಿಸಿದ ಮೋರ್ಬಿ ವಕೀಲರ ಸಂಘದ ಕಾರ್ಯದರ್ಶಿ ಜೆ ಡಿ ಅಗೆಚನಿಯಾ.

  • ಮೋರ್ಬಿ ಸೇತುವೆ ದುರಂತ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ವೈಫಲ್ಯವನ್ನು ತಿಳಿಸುತ್ತದೆ ಎಂದು ದೂರಿ ದೆಹಲಿ ಮೂಲದ ವಕೀಲ ವಿಶಾಲ್ ತಿವಾರಿ ಅವರಿಂದ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ.

  • ಘಟನೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಮನವಿ.

  • ನವೆಂಬರ್ 14 ರಂದು ಪ್ರಕರಣದ ವಿಚಾರಣೆ ನಡೆಸಲಿರುವ ಸರ್ವೋಚ್ಚ ನ್ಯಾಯಾಲಯ.