Gujarat High Court 
ಸುದ್ದಿಗಳು

ಮೋರ್ಬಿ ದುರಂತ: ಕಪ್ಪುಪಟ್ಟಿಗೆ 'ಒರೆವಾʼ ಸಂಸ್ಥೆಯನ್ನು ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ಗುಜರಾತ್ ಹೈಕೋರ್ಟ್

ಯಾವುದೇ ಸಾರ್ವಜನಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗದಂತೆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪೀಠ ತಿಳಿಸಿದೆ.

Bar & Bench

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೂರಾರು ಜನರನ್ನು ಬಲಿ ತೆಗೆದುಕೊಂಡಿದ್ದ ಮೋರ್ಬಿ ಸೇತುವೆಯ ದುರಸ್ತಿ ಮತ್ತು ನಿರ್ವಹಣೆಯ ಹೊಣೆ ಹೊತ್ತಿದ್ದ ಖಾಸಗಿ ಗುತ್ತಿಗೆದಾರ ಕಂಪೆನಿ ಒರೆವಾ ಸಮೂಹವನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಯಾವುದೇ ಸಾರ್ವಜನಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗದಂತೆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸುನಿತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಮಯೀ ಅವರಿದ್ದ ಪೀಠ ತಿಳಿಸಿದೆ.

ಮೋರ್ಬಿಯಲ್ಲಿ ಮಚ್ಚು ನದಿಯ ಮೇಲೆ ನಿರ್ಮಿಸಲಾಗಿದ್ದ 141 ವರ್ಷ ಹಳೆಯದಾದ ತೂಗು ಸೇತುವೆ 2022ರ ಅಕ್ಟೋಬರ್ 30ರಂದು ಕುಸಿದು ಸುಮಾರು 135 ಜನರು ಸಾವನ್ನಪ್ಪಿದ್ದರು. ಒರೆವಾ ಗ್ರೂಪ್ ಎಂಬ ಖಾಸಗಿ ಸಂಸ್ಥೆ ನಡೆಸಿದ ಸೇತುವೆಯ ದುರಸ್ತಿ ಬಳಿಕ ಅದು ಕುಸಿದಿತ್ತು.

ಮಂಗಳವಾರ ಪ್ರಕರಣದ ವಿಚಾರಣೆ ನಡೆದಾಗ ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ಅವರು ಕ್ರಿಮಿನಲ್ ಮೊಕದ್ದಮೆಯಿಂದ ಹಿಡಿದು ಸಿವಿಲ್ ಕಾನೂನು ಕ್ರಮ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪ್ರಕರಣದ ಬೆಳವಣಿಗೆಗಳನ್ನು ಪೀಠಕ್ಕೆ ತಿಳಿಸಿದರು.

ನಗರ ಪಾಲಿಕೆ ಮತ್ತು ಗುತ್ತಿಗೆದಾರರ ನಡುವೆ ಯಾವುದೇ ಒಪ್ಪಂದ  ಏರ್ಪಟ್ಟಿತ್ತೇ ಎಂದು ಪೀಠವು ಪ್ರಶ್ನೆ ಕೇಳಿದಾಗ, ಸೇತುವೆಯ ನಿರ್ವಹಣೆಗಾಗಿ ಆರಂಭದಲ್ಲಿ ಗುತ್ತಿಗೆದಾರರು 'ಸ್ವಯಂ ಪ್ರೇರಿತರಾಗಿ' ಮುಂದಾಗಿದ್ದರು ಎಂದು ಎ ಜಿ ತ್ರಿವೇದಿ ವಿವರಿಸಿದರು. ಆಗ ಪೀಠ ಒರೆವಾ ಸಮೂಹವನ್ನು ಕಪ್ಪು ಪಟ್ಟಿಗೆ ಸೇರಿಸುವಂತಹ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತು.  

"ನೀವು ಗುತ್ತಿಗೆದಾರರನ್ನು ಏಕೆ ಕಪ್ಪು ಪಟ್ಟಿಗೆ ಸೇರಿಸಬಾರದು? ಇಲ್ಲದಿದ್ದರೆ ಅವರು ಬೇರೆಡೆ ಸ್ವಯಂಪ್ರೇರಿತರಾಗಿ ಸೇವೆ ಒದಗಿಸಲು ಮುಂದಾಗುತ್ತಾರೆ. ಅವರು ಸಾರ್ವಜನಿಕ ಚಟುವಟಿಕೆಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿರುವುದು ತುಂಬಾ ವಿಚಿತ್ರವಾಗಿದೆ" ಎಂದು ಮುಖ್ಯ ನ್ಯಾಯಮೂರ್ತಿ ಅಗರ್ವಾಲ್ ಹೇಳಿದರು.

ದಾನಧರ್ಮದ ಹೆಸರಿನಲ್ಲಿ ಸೇವೆ ಒದಗಿಸುವುದಾಗಿ ತಿಳಿಸಿ ಕಂಪೆನಿ ನೂರಾರು ಜನರ ಜೀವವನ್ನು ಬಲಿತೆಗೆದುಕೊಂಡ ಬಗ್ಗೆ  ಬೇಸರ ವ್ಯಕ್ತಪಡಿಸಿದ ನ್ಯಾಯಾಲಯ “ದುರ್ಘಟನೆಯಲ್ಲಿ ಅನಾಥವಾದ ಮಕ್ಕಳ ಶ್ರೇಯೋಭಿವೃದ್ಧಿಗೆ ಒರೆವಾ ಏನು ಮಾಡಿದೆ?, ಪರಿಹಾರ ಒದಗಿಸುವುದಷ್ಟೇ ಸಾಲದು ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಕಂಪೆನಿ ಉದ್ಯೋಗ ಒದಗಿಸಬೇಕು” ಎಂದು ನುಡಿಯಿತು.

ಎಸ್‌ಐಟಿ ತನ್ನ ಅಂತಿಮ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಪಾಲಿಸುವಂತೆ ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು. ದೀಪಾವಳಿ ರಜೆಯ ಬಳಿಕ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.