Gujarat HC, Morbi Bridge 
ಸುದ್ದಿಗಳು

ಮೋರ್ಬಿ ಸೇತುವೆ ದುರಂತ: ಆರೋಪಿಗಳಿಂದ ಜಾಮೀನು ಕೋರಿಕೆ, ಆಕ್ಷೇಪಣೆ ಸಲ್ಲಿಸಲು ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಕಳೆದ ತಿಂಗಳು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದರಿಂದ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Bar & Bench

ಗುಜರಾತ್‌ನಲ್ಲಿ ಮೋರ್ಬಿ ತೂಗುಸೇತುವೆ ಕುಸಿತ ದುರಂತದ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಂಟು ಮಂದಿಯ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಈಚೆಗೆ ರಾಜ್ಯ ಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ ಆಕ್ಷೇಪಣೆ ಸಲ್ಲಿಸಲು ನೋಟಿಸ್‌ ಜಾರಿ ಮಾಡಿದೆ.

ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಮೀರ್‌ ದವೆ ಅವರ ನೇತೃತ್ವದ ಏಕಸದಸ್ಯ ಪೀಠವು 2023ರ ಜನವರಿ 3ರ ಒಳಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಖಾಸಗಿ ಗುತ್ತಿಗೆ ಕಂಪೆನಿಯಾದ ಒರೆವಾ ಸಮೂಹದ ವ್ಯವಸ್ಥಾಪಕರಾದ ದಿನೇಶ್‌ ದವೆ ಮತ್ತು ದೀಪಕ್‌ ಪಾರೇಖ್‌, ತುಂಡು ಗುತ್ತಿಗೆದಾರರಾದ ಪ್ರಕಾಶ್‌ ಪಾರ್ಮರ್‌, ಟಿಕೆಟ್‌ ಬುಕಿಂಗ್ ಮತ್ತು ಭದ್ರತಾ ಸಿಬ್ಬಂದಿ ಅಲ್ಪೇಶ್‌ ಗೋಹಿಲ್‌, ಮನ್ಸುಖ್‌ ಟೋಪಿಯಾ, ಮಹಾದೇವ್‌ ಸೋಲಂಕಿ, ಮುಕೇಶ್‌ ಚೌಹಾಣ್‌ ಮತ್ತು ದಿಲೀಪ್‌ ಗೋಹಿಲ್‌ ಅವರು ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವಾರ ಇವರುಗಳಿಗೆ ಸತ್ರ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿತ್ತು.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 304, 308, 336, 337 ಮತ್ತು 114 ರ ಪ್ರಕರಣ ದಾಖಲಿಸಲಾಗಿದೆ.

ಮೋರ್ಬಿಯಲ್ಲಿ ಮಚ್ಚು ನದಿಯ ಮೇಲೆ ನಿರ್ಮಿಸಲಾಗಿದ್ದ 141 ವರ್ಷ ಹಳೆಯದಾದ ತೂಗು ಸೇತುವೆ ಅಕ್ಟೋಬರ್ 30 ರಂದು ಕುಸಿದು ಸುಮಾರು 135 ಜನರು ಸಾವನ್ನಪ್ಪಿದ್ದರು. ಒರೆವಾ ಗ್ರೂಪ್ ಎಂಬ ಖಾಸಗಿ ಸಂಸ್ಥೆ ನಡೆಸಿದ ಸೇತುವೆಯ ದುರಸ್ತಿ ಬಳಿಕ ಅದು ಕುಸಿದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದೆ.