Murder 
ಸುದ್ದಿಗಳು

ಪಿಯುಸಿ ಫೇಲಾಗಿದ್ದರೂ ಉತ್ತಮ ಅಂಕ ಪಡೆದಿರುವುದಾಗಿ ಸುಳ್ಳು ಹೇಳಿದ್ದ ಪುತ್ರಿಯ ಕೊಲೆ: ಅಮ್ಮನಿಗೆ ಜೀವಾವಧಿ ಶಿಕ್ಷೆ

ಪುತ್ರಿಯಾದ ಸಾಹಿತಿ ಶಿವಪ್ರಿಯಾ ಒಂದಲ್ಲ ನಾಲ್ಕು ವಿಷಯಗಳಲ್ಲಿ ನಪಾಸಾಗಿದ್ದಾಳೆ ಎಂಬ ವಿಚಾರವನ್ನು ಆಕೆಯ ಸ್ನೇಹಿತೆಯಿಂದ ಪದ್ಮಜಾ ಫೋನಿನಲ್ಲಿ ಖಾತರಿಪಡಿಸಿಕೊಂಡು, ಅದರಿಂದ ಘಾಸಿಗೊಂಡು ಕೊಲೆ ಮಾಡಿದ್ದರು.

Bar & Bench

ಕಳೆದ ವರ್ಷದ ಪಿಯು ಪರೀಕ್ಷೆಯಲ್ಲಿ ಶೇ.95 ಅಂಕ ಪಡೆದಿರುವುದಾಗಿ ಸುಳ್ಳು ಹೇಳಿದ್ದ ಪುತ್ರಿಯನ್ನು ಕೊಲೆ ಮಾಡಿದ್ದ 59 ವರ್ಷದ ತಾಯಿಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಪುತ್ರಿ ಸಾಹಿತಿ ಶಿವಪ್ರಿಯಾಳನ್ನು ಕೊಲೆ ಮಾಡಿರುವುದು ದೃಢಪಟ್ಟಿರುವುದರಿಂದ ಐಪಿಸಿ ಸೆಕ್ಷನ್‌ 302 (ಕೊಲೆ) ಅಪರಾಧಕ್ಕಾಗಿ ಪದ್ಮಜಾ ರಾಣಿ ಅಲಿಯಾಸ್‌ ಭೀಮಿಣಿ ಪದ್ಮಜಾ ರಾಣಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ 50ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಸಿ ಬಿ ಸಂತೋಷ್‌ ತೀರ್ಪು ನೀಡಿದೆ.

Judge C B Santhosh

ಬೆಂಗಳೂರಿನ ಜಯನಗರದಲ್ಲಿರುವ ಜೈನ್‌ ಕಾಲೇಜಿನ ವಿದ್ಯಾರ್ಥಿನಿಯಾದ ಸಾಹಿತಿ ಶಿವಪ್ರಿಯಾ ಪಿಯು ವಿಜ್ಞಾನ ವಿಭಾಗದಲ್ಲಿ ಮೊದಲಿಗೆ ಶೇ.95.5 ಅಂಕ ಪಡೆದಿರುವುದಾಗಿ ತಾಯಿ ಪದ್ಮಜಾ ಬಳಿ ಹೇಳಿಕೊಂಡಿದ್ದಳು.

ಇದನ್ನು ನಂಬಿ ಸಂಬಂಧಿಗಳಿಗೆ ಇದೇ ರೀತಿ ಪದ್ಮಜಾ ಹೇಳಿದ್ದು, ಆಕೆ ವಿದೇಶಿ ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನದ ಓದು ಮುಂದುವರಿಸಲಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆದರೆ, 28-04-2024ರಂದು ಸಾಹಿತಿಯು ತಾನು ಒಂದು ವಿಷಯದಲ್ಲಿ ನಪಾಸಾಗಿದ್ದು, ತನ್ನ ಬೆಂಬಲ ಇಲ್ಲದಿದ್ದರಿಂದ ನಪಾಸಾಗಿರುವುದಾಗಿ ಏರುಧ್ವನಿಯಲ್ಲಿ ಅಮ್ಮ ಪದ್ಮಜಾ ಜೊತೆ ವಾಗ್ವಾದ ನಡೆಸಿ, ಈ ವಿಚಾರವನ್ನು ಯಾರಿಗೂ ಹೇಳದಂತೆ ಎಚ್ಚರಿಸಿ ಮೊದಲ ಅಂತಸ್ತಿನಲ್ಲಿದ್ದ ತನ್ನ ರೂಮಿಗೆ ಹೋಗಿ ಲಾಕ್‌ ಮಾಡಿಕೊಂಡಿದ್ದಳು.

ಇದರಿಂದ ಘಾಸಿಗೊಂಡಿದ್ದ ಪದ್ಮಜಾ ಅವರು ಸಾಹಿತಿಯ ಸ್ನೇಹಿತೆಗೆ ಏಪ್ರಿಲ್‌ 29ರಂದು ಫೋನ್‌ ಮಾಡಿ ಕೇಳಲಾಗಿ, ಸಾಹಿತಿಯು ಒಟ್ಟು ನಾಲ್ಕು ವಿಷಯಗಳಲ್ಲಿ ನಪಾಸಾಗಿದ್ದಾಳೆ ಎಂದು ಆಕೆ ತಿಳಿಸಿದ್ದರು. ಇದರಿಂದ ಮತ್ತಷ್ಟು ಘಾಸಿಗೊಂಡ ಪದ್ಮಜಾ ಏಕಾಏಕಿ ಸಾಹಿತಿ ರೂಮಿಗೆ ತೆರಳಿ ಅವಳ ಕುತ್ತಿಗೆಗೆ ಕಾಲೇಜು ಗುರುತಿನ ಚೀಟಿಯ ದಾರದಿಂದ ಬಿಗಿದು, ಚಾಕುವಿನಿಂದ ಹಲವಾರು ಬಾರಿ ಚುಚ್ಚಿ ಸಾಯಿಸಿದ್ದರು. ಆನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಭಯದಿಂದ ಆ ಪ್ರಯತ್ನವನ್ನು ಕೈಬಿಟ್ಟಿದ್ದರು. ಈ ವಿಚಾರವನ್ನು ಪದ್ಮಜಾ ಅವರೇ ತನ್ನ ಕಚೇರಿಯ ಸಹೋದ್ಯೋಗಿಗಳಿಗೆ ತಿಳಿಸಲಾಗಿ, ಅವರು ಮನೆಗೆ ಬಂದಾಗ ಇಡೀ ಕೃತ್ಯ ಬಯಲಾಗಿತ್ತು.

ಇದಕ್ಕೂ ಮುನ್ನ, ಮಂಡಿ ನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತನ್ನನ್ನು ಪುತ್ರಿ ಸಾಹಿತಿ ಸರಿಯಾಗಿ ಆರೈಕೆ ಮಾಡಿಲ್ಲ ಎಂಬ ಬೇಸರವೂ ಪದ್ಮಜಾ ಅವರಲ್ಲಿತ್ತು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ 2024ರ ಏಪ್ರಿಲ್‌ 29ರಂದು ಪದ್ಮಜಾ ವಿರುದ್ಧ ಐಪಿಸಿ ಸೆಕ್ಷನ್‌ 302ರ ಅಡಿ ಪ್ರಕರಣ ದಾಖಲಾಗಿತ್ತು.