ಮೋತಿ ಮಹಲ್ ಮತ್ತು ದರಿಯಾಗಂಜ್ ರೆಸ್ಟೋರೆಂಟ್ ಗಳು 
ಸುದ್ದಿಗಳು

"ಬಟರ್ ಚಿಕನ್, ದಾಲ್ ಮಖನಿ ಆವಿಷ್ಕರಿಸಿದ್ದು ಯಾರು?" ದೆಹಲಿ ಹೈಕೋರ್ಟ್‌ನಲ್ಲಿ ಹೀಗೊಂದು ದಾವೆ

Bar & Bench

'ಬಟರ್ ಚಿಕನ್ ಮತ್ತು ದಾಲ್ ಮಖನಿಯನ್ನು ಕಂಡುಹಿಡಿದಿದ್ದು ಯಾರು?' ಬಾಯಲ್ಲಿ ನೀರೂರಿಸುವಂತಹ ಈ ಪ್ರಶ್ನೆಗೆ ಮೋತಿ ಮಹಲ್ ಮತ್ತು ದರಿಯಾಗಂಜ್ ರೆಸ್ಟರಂಟ್‌ ನಡುವಣ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ನೀಡುವ ತೀರ್ಪು ಉತ್ತರಿಸಲಿದೆ (ರೂಪಾ ಗುಜ್ರಾಲ್ ಮತ್ತಿತರರು ಹಾಗೂ ದರಿಯಾಗಂಜ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ).

"ಬಟರ್ ಚಿಕನ್ ಮತ್ತು ದಾಲ್ ಮಖನಿಯ ಆವಿಷ್ಕಾರಕರು" ಎಂಬ ಅಡಿಬರಹ ಬಳಸಿದ್ದಕ್ಕಾಗಿ ದರಿಯಾಗಂಜ್ ರೆಸ್ಟರಂಟ್‌ ವಿರುದ್ಧ ಮೋತಿ ಮಹಲ್ ಮೊಕದ್ದಮೆ ಹೂಡಿದೆ.

ದೆಹಲಿಯ ದರಿಯಾಗಂಜ್‌ನಲ್ಲಿ ಮೊದಲ ಶಾಖೆ ತೆರೆದ ಮೋತಿ ಮಹಲ್‌ ಹಾಗೂ ದರಿಯಾಗಂಜ್‌ ರೆಸ್ಟರಂಟ್‌ ನಡುವೆ ಸಂಬಂಧ ಇರುವಂತೆ ದರಿಯಾಗಂಜ್‌ ರೆಸ್ಟರಂಟ್‌ ಜನರ ದಾರಿ ತಪ್ಪಿಸುತ್ತಿದೆ ಎಂದು ಮೋತಿ ಮಹಲ್‌ ಆಪಾದಿಸಿದೆ.

ಮಧ್ಯಂತರ ತಡೆಯಾಜ್ಞೆ ಕೋರಿ ಮೋತಿ ಮಹಲ್‌ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜನವರಿ 16ರಂದು ನಡೆಸಿದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ದರಿಯಾಗಂಜ್‌ ರೆಸ್ಟರಂಟ್‌ಗೆ ಸಮನ್ಸ್‌ ನೀಡಿದರು. ಒಂದು ತಿಂಗಳಲ್ಲಿ ದಾವೆಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸುವಂತೆ ದರಿಯಾಗಂಜ್ ರೆಸ್ಟರಂಟ್ ಮಾಲೀಕರಿಗೆ ಸೂಚಿಸಿ ಮೇ 29ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದರು.

ತಾವೇ ಬಟರ್‌ ಚಿಕನ್‌ ಹಾಗೂ ದಾಲ್‌ ಮಖಾನಿಯನ್ನು ಕಂಡು ಹಿಡಿದಿದ್ದು ಎಂದು ಹಲವು ವರ್ಷಗಳಿಂದ ಈ ಎರಡೂ ರೆಸ್ಟರಂಟ್‌ಗಳು ಹೇಳಿಕೊಳ್ಳುತ್ತಿವೆ.

ತಮ್ಮ ಪೂರ್ವಿಕರಾದ ದಿವಂಗತ ಕುಂದನ್‌ ಲಾಲ್ ಗುಜ್ರಾಲ್ ಅವರು ವಿಶ್ವಪ್ರಸಿದ್ಧವಾದ ಈ ಭಕ್ಷ್ಯಗಳನ್ನು ಆವಿಷ್ಕರಿಸಿದರು ಎಂದು ಮೋತಿ ಮಹಲ್‌ ಹೇಳಿಕೊಂಡರೆ ಇವು ದಿವಂಗತ ಕುಂದನ್ ಲಾಲ್ ಜಗ್ಗಿ ಅವರ ಪಾಕ ಎಂದು ದರಿಯಾಗಂಜ್‌ ರೆಸ್ಟರಂಟ್‌ ಪ್ರತಿಪಾದಿಸುತ್ತಾ ಬಂದಿದೆ.

ತನ್ನ ಪೂರ್ವಿಕರಾದ ಗುಜ್ರಾಲ್‌ ಅವರು ಮೊದಲು ತಂದೂರಿ ಚಿಕನ್‌ ಆವಿಷ್ಕರಿಸಿದರು. ನಂತರ ಬಟರ್‌ ಚಿಕನ್‌ ಮತ್ತು ದಾಲ್‌ ಮಖನಿ ತಯಾರಿಸಿದರು. ದೇಶ ವಿಭಜನೆ ನಂತರ ಅವುಗಳನ್ನು ಭಾರತದಲ್ಲಿ ಪರಿಚಯಿಸಿದರು ಎಂದು ಮೋತಿ ಮಹಲ್‌ ಮೊಕದ್ದಮೆಯಲ್ಲಿ ಪ್ರತಿಪಾದಿಸಿದೆ.

ಮಾರಾಟವಾಗದ ಕೋಳಿ ಮಾಂಸವನ್ನು ಆರಂಭದ ದಿನಗಳಲ್ಲಿ ಗುಜ್ರಾಲ್‌ ಅವರಿಗೆ ಶೀತಲೀಕರಿಸಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಹೀಗಾಗಿ ಬೇಯಿಸಿದ ಕೋಳಿ ಮಾಂಸದ ಬಗ್ಗೆ ಚಿಂತಿತರಾದ ಅವರು ಸಾಸ್‌ ಕಂಡುಹಿಡಿದು ಅದರಲ್ಲಿ ಕೋಳಿಮಾಂಸ ಒಣಗದಂತೆ ಇರಿಸಿದರು ಎಂಬುದು ಮೋತಿ ಮಹಲ್‌ ವಾದ.

ಅವರ ಈ ಆವಿಷ್ಕಾರವಾದ ʼಮಖನಿʼ ಅಥವಾ ಬೆಣ್ಣೆ ಸಾಸ್ (ಟೊಮೆಟೊ, ಬೆಣ್ಣೆ, ಕ್ರೀಮ್ ಹಾಗೂ ಕೆಲ ಮಸಾಲೆಗಳನ್ನು ಒಳಗೊಂಡ ಗ್ರೇವಿ) ಇದೀಗ ಗಾಢಪರಿಮಳದ ರುಚಿಕರ ಸ್ವಾದ ನೀಡುತ್ತದೆ. ದಾಲ್‌ ಮಖನಿ ಆವಿಷ್ಕಾರಕ್ಕೂ ಬಟರ್‌ ಚಿಕನ್‌ ಆವಿಷ್ಕಾರಕ್ಕೂ ನಿಕಟ ಸಂಬಂಧ ಇದ್ದು ಗುಜ್ರಾಲ್‌ ಅವರು ಈ ಪಾಕವನ್ನು ಕಪ್ಪು ಬೇಳೆಕಾಳುಗಳೊಂದಿಗೆ ಬೆರೆಸಿ ಬೇಯಿಸಿದರು. ಇದೇ ಸಮಯದಲ್ಲಿ ದಾಲ್‌ ಮಖನಿಯೂ ಕಣ್ತೆರೆಯಿತು ಎಂದು ಅದು ಹೇಳಿದೆ.

ಈ ದಾವೆಗೆ ದರಿಯಾ ಗಂಜ್‌ ಇನ್ನೂ ಪ್ರತಿಕ್ರಿಯೆ ಸಲ್ಲಿಸಿಲ್ಲವಾದರೂ ಅದರ ಪರ ವಕೀಲರು ಜನವರಿ 16 ರಂದು ನ್ಯಾಯಾಲಯದ ಮುಂದೆ ಹಾಜರಾಗಿ ಇಡೀ ದಾವೆ ಆಧಾರರಹಿತವಾಗಿದ್ದು ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಬಲವಾಗಿ ವಿರೋಧಿಸಿದ್ದಾರೆ.

ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ ಮತ್ತು ಮೋತಿ ಮಹಲ್‌ ದಾವೆಯಲ್ಲಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಅವರು ಹೇಳಿದ್ದಾರೆ.

ಮೋತಿಮಹಲ್‌ನ ಗುಜ್ರಾಲ್‌ ಮತ್ತು ದರಿಯಾಗಂಜ್‌ ರೆಸ್ಟರಂಟ್‌ನ ಜಗ್ಗಿ ಅವರು ಜಂಟಿಯಾಗಿ (ಈಗ ಪಾಕಿಸ್ತಾನದ ಭಾಗವಾಗಿರುವ) ಪೇಶಾವರದಲ್ಲಿ ಪ್ರಪ್ರಥಮ ಮೋತಿ ಮಹಲ್ ರೆಸ್ಟರಂಟ್‌ ಸ್ಥಾಪಿಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಮೋತಿ ಮಹಲ್ ಮಾಲೀಕರ ಪರವಾಗಿ ಹಿರಿಯ ವಕೀಲರಾದ ಸಂದೀಪ್ ಸೇಥಿ ಮತ್ತು ಚಂದರ್ ಎಂ ಲಾಲ್ ಮತ್ತು ವಕೀಲ ಶ್ರೇಯಾ ಸೇಥಿ ವಾದ ಮಂಡಿಸಿದ್ದರು.

ಹಿರಿಯ ವಕೀಲ ಅಮಿತ್ ಸಿಬಲ್ , ವಕೀಲರಾದ ಪ್ರವೀಣ್ ಆನಂದ್, ಧ್ರುವ್ ಆನಂದ್, ಉದಿತಾ, ರೇವಂತ ಮಾಥುರ್, ನಿಮ್ರತ್ ಸಿಂಗ್ ಮತ್ತು ಡಿ ಖನ್ನಾ ಅವರು ದರಿಯಾಗಂಜ್ ರೆಸ್ಟೋರೆಂಟ್ ಮಾಲೀಕರನ್ನು ಪ್ರತಿನಿಧಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Rupa Gujral & Ors v Daryaganj Hospitality Private Limited & Ors.pdf
Preview