Justice J M Khazi and Karnataka HC 
ಸುದ್ದಿಗಳು

[ಅಪಘಾತ ಪ್ರಕರಣ] ವೈದ್ಯಕೀಯ ಬಿಲ್‌ನ ನೈಜತೆ ಪರಿಶೀಲಿಸುವುದು ಎಂಎಸಿಟಿ ಕರ್ತವ್ಯ: ಹೈಕೋರ್ಟ್‌

ಸಾಲಿಬಾಯಿ ಅವರಿಗೆ ಅಪಘಾತ ನಡೆದ ದಿನದಿಂದ ವಾರ್ಷಿಕ ಶೇ.6ರಷ್ಟು ಬಡ್ಡಿದರದಲ್ಲಿ 5.98 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ 2018ರ ಜನವರಿ 17ರಂದು ಆದೇಶಿಸಿದ್ದ ನ್ಯಾಯ ಮಂಡಳಿ.

Bar & Bench

ಅಪಘಾತ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದಾಗ ಅದರೊಂದಿಗೆ ಲಗತ್ತಿಸುವ ಪ್ರತಿಯೊಂದು ವೈದ್ಯಕೀಯ ಬಿಲ್‌ನ ನೈಜತೆ ಪರಿಶೀಲಿಸುವುದು ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿಗಳ (ಎಂಎಸಿಟಿ) ಕರ್ತವ್ಯವಾಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಆದೇಶ ಮಾಡಿದೆ.

ಅಪಘಾತ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರಿಗೆ 5.98 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದ ಎಂಎಸಿಟಿ ಆದೇಶ ಪ್ರಶ್ನಿಸಿ ಓರಿಯೆಂಟಲ್ ವಿಮಾ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ಏಕ ಸದಸ್ಯ ಪೀಠ ನಡೆಸಿತು.

ಅಪಘಾತದಿಂದ ತಮಗೆ ಆದ ಗಾಯಕ್ಕೆ ಪಡೆದ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಸಲ್ಲಿಸಿರುವ ಬಿಲ್‌ಗಳಲ್ಲಿ ಕೆಲವು ಕಲರ್ ಜೆರಾಕ್ಸ್ ಬಿಲ್‌ಗಳಿವೆ. ಅಸಲಿ ಬಿಲ್‌ ನೀಡದಿರುವುದಕ್ಕೆ ಸಮಂಜಸ ಕಾರಣ ನೀಡಿಲ್ಲ. ಹೀಗಿದ್ದರೂ ಜೆರಾಕ್ಸ್ ಬಿಲ್‌ಗಳನ್ನೇ ಪರಿಗಣಿಸಿ ವೈದ್ಯಕೀಯ ಚಿಕಿತ್ಸೆಗೆ 2.26 ಲಕ್ಷ ರೂಪಾಯಿ ಪರಿಹಾರವನ್ನು ನ್ಯಾಯ ಮಂಡಳಿ ನಿಗದಿಪಡಿಸಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಪರಿಹಾರ ಪ್ರಮಾಣ ಹೆಚ್ಚಿಸುವ ದುರುದ್ದೇಶದಿಂದಲೇ ಕೆಲವೊಂದು ಪ್ರತಿಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ನೀಡಲಾಗಿದೆ. ಮಹಿಳೆಯ ಸಲ್ಲಿಸಿರುವ 154 ಬಿಲ್‌ಗಳಲ್ಲಿ 79 ಬಿಲ್‌ಗಳು ಮಾತ್ರ ಅಸಲಿಯಾಗಿವೆ. ಉಳಿದ ಬಿಲ್‌ಗಳು ನಕಲು ಪ್ರತಿಯಾಗಿವೆ. ನ್ಯಾಯ ಮಂಡಳಿಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಮಹಿಳೆ ಬಿಲ್‌ಗಳನ್ನು ಕ್ರಮಬದ್ಧವಾಗಿ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಬಿಲ್‌ಗಳ ನೈಜತೆಯನ್ನು ಸೂಕ್ಷ್ಮವಾಗಿ ಗಮನಿಸುವಲ್ಲಿ ನ್ಯಾಯ ಮಂಡಳಿ ವಿಫಲವಾಗಿದೆ. ಪ್ರತಿಯೊಂದು ವೈದ್ಯಕೀಯ ಬಿಲ್‌ನ ನೈಜತೆ ಪರಿಶೀಲಿಸುವುದು ನ್ಯಾಯ ಮಂಡಳಿಯ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಂತಿಮವಾಗಿ ಮಹಿಳೆಗೆ ನ್ಯಾಯ ಮಂಡಳಿ ಘೋಷಿಸಿದ್ದ 5.98 ಲಕ್ಷ ರೂಪಾಯಿಯನ್ನು 2,89,540 ರೂಪಾಯಿಗೆ ಇಳಿಸಿ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2016ರ ಮೇ 8ರಂದು ಸಂಜೆ 6.30ಕ್ಕೆ ಸಾಲಿಬಾಯಿ ಎಂಬಾಕೆ ಸಂಬಂಧಿಕರ ಮದುವೆಗೆ ಹಾಜರಾಗಲು ಕಲಬುರ್ಗಿಯ ವಾಡಿ ಪಟ್ಟಣಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅವರು ಹಿಂಬದಿ ಸವಾರರಾಗಿದ್ದರು. ಕಳಕಟ್ಟ ಗ್ರಾಮದ ಬಸ್ ನಿಲ್ದಾಣದಲ್ಲಿ ರಸ್ತೆ ಉಬ್ಬು ಬಂದಾಗ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನ ಬಿದ್ದಿತ್ತು.

ಈ ವೇಳೆ ಮಹಿಳೆಯ ತೆಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಅವರನ್ನು ಸ್ಥಮೀಪದ ಸರ್ಕಾರಿ ಆಸ್ಪತೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಮೇ 8ರಿಂದ 23ರವರಿಗೆ ಹೆಚ್ಚಿನ ಚಿಕಿತ್ಸೆ ಕಲ್ಪಿಸಲಾಗಿತ್ತು. ದ್ವಿಚಕ್ರ ವಾಹನಕ್ಕೆ ವಿಮೆಯಿದ್ದ ಕಾರಣ ಅದರ ಮಾಲೀಕರು ಪರಿಹಾರಕ್ಕಾಗಿ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯ ಮಂಡಳಿಯು ಸಾಲಿಬಾಯಿ ಅವರಿಗೆ ಅಪಘಾತ ನಡೆದ ದಿನದಿಂದ ವಾರ್ಷಿಕ ಶೇ.6ರಷ್ಟು ಬಡ್ಡಿದರದಲ್ಲಿ 5.98 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ 2018ರ ಜನವರಿ 17ರಂದು ಆದೇಶಿಸಿತ್ತು. ಈ ಪರಿಹಾರ ಮೊತ್ತವು ಕಡಿಮೆ ಮಾಡಬೇಕು ಎಂದು ಕೋರಿ ವಿಮಾ ಕಂಪೆನಿ ಮತ್ತು ಪರಿಹಾರ ಮೊತ್ತವನ್ನು 20 ಲಕ್ಷ ರೂಪಾಯಿಗೆ ಹೆಚ್ಚಿಸಲು ಕೋರಿ ಸಾಲಿಬಾಯಿ ಹೈಕೋರ್ಟ್‌ಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

ವಿಮಾ ಕಂಪೆನಿ ಪರ ವಕೀಲರು “ಸಾಲಿಬಾಯಿ ಸಲ್ಲಿಸಿರುವ ನಕಲಿ ವೈದ್ಯಕೀಯ ಬಿಲ್‌ಗಳನ್ನು ಪರಿಗಣಿಸಿದ ನ್ಯಾಯ ಮಂಡಳಿಯು ವೈದ್ಯಕೀಯ ಚಿಕಿತ್ಸೆ ವೆಚ್ಚಕ್ಕಾಗಿ 2.26 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 5.98 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಘಟನೆ ಸಂದರ್ಭದಲ್ಲಿ ಹಿಂಬದಿ ಸವಾರರಾಗಿದ್ದ ಸಾಯಿಬಾಲಿ ಹೆಲ್ಮೆಟ್ ಹಾಕದ ಪರಿಣಾಮ ತಲೆಗೆ ಹೆಚ್ಚು ಪೆಟ್ಟಾಗಿದೆ. ಘಟನೆಯಲ್ಲಿ ಅವರ ನಿರ್ಲಕ್ಷ್ಯವನ್ನು ಪರಿಗಣಿಸಿ ಪರಿಹಾರ ಮೊತ್ತ ಕಡಿತಗೊಳಿಸಬೇಕು” ಎಂದು ಕೋರಿದ್ದರು.