ಅಪಘಾತದಲ್ಲಿ ಜನರಿಗೆ ಗಾಯವಾದರೆ ಮಾತ್ರ ಮೋಟಾರು ವಾಹನ ಕಾಯಿದೆ ಅನ್ವಯಿಸುತ್ತದೆಯೇ ವಿನಾ ಸಾಕು ಪ್ರಾಣಿ ಅಥವಾ ಪ್ರಾಣಿಗೆ ಅದು ಅನ್ವಯಿಸುವುದಿಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್, ಪ್ರಕರಣ ರದ್ದುಪಡಿಸಿದೆ.
ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿ ಜಿ ಪ್ರತಾಪ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
ಮೋಟಾರು ವಾಹನ ಕಾಯಿದೆ ಸೆಕ್ಷನ್ 134, ವ್ಯಕ್ತಿಗೆ ಗಾಯ ಅಥವಾ ಮೂರನೇ ವ್ಯಕ್ತಿಯ ಆಸ್ತಿ ನಷ್ಟವಾಗಿರುವುದಕ್ಕೆ ಅನ್ವಯಿಸುತ್ತದೆ. ಆದರೆ ಸೆಕ್ಷನ್ 134 (ಎ) ಮತ್ತು (ಬಿ) ಯು ಆಸ್ತಿ ನಷ್ಟಕ್ಕೆ ಅನ್ವಯಿಸುವುದಿಲ್ಲ. ಸೆಕ್ಷನ್ 134 (ಎ) ಮತ್ತು (ಬಿ) ಯು ವೈದ್ಯಕೀಯ ಶುಶ್ರೂಷೆ ನೀಡುವುದರ ಬಗ್ಗೆ ಮಾತನಾಡುತ್ತದೆ. ಹಾಲಿ ಪ್ರಕರಣದಲ್ಲಿ ಸಾಕು ಪ್ರಾಣಿ/ಪ್ರಾಣಿಯು ಮೂರನೇ ವ್ಯಕ್ತಿಯ ಆಸ್ತಿ ಎಂದಾದರೆ ಅದು ಮೋಟಾರು ವಾಹನ ಕಾಯಿದೆ ಸೆಕ್ಷನ್ 134 (ಎ) ಮತ್ತು (ಬಿ) ಅಡಿ ಅಪರಾಧವಾಗುವುದಿಲ್ಲ. ಹೀಗಾಗಿ, ಆರೋಪಿಸಲಾದ ಕಾಯಿದೆಯ ಸೆಕ್ಷನ್ ವ್ಯಕ್ತಿಗೆ ಗಾಯವಾದರೆ ಮಾತ್ರ ಅನ್ವಯಿಸುತ್ತದೆಯೇ ವಿನಾ ನಾಯಿ ಅಥವಾ ಸಾಕು ಪ್ರಾಣಿ, ಪ್ರಾಣಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಂ ಶಶಿಧರ ಅವರು “ಅರ್ಜಿದಾರರು ಮತ್ತು ಸಾಕು ಪ್ರಾಣಿ ಇಬ್ಬರೂ ಪರಿಚಿತರಲ್ಲ. ಹೀಗಾಗಿ, ಅರ್ಜಿದಾರರು ದ್ವೇಷ ಅಥವಾ ಯಾವುದೇ ಕಾರಣದಿಂದ ಸಾಕು ನಾಯಿಗೆ ಹಾನಿ ಮಾಡಿಲ್ಲ” ಎಂದು ವಾದಿಸಿದ್ದರು. ಪ್ರತಿವಾದಿಗಳ ಪರ ವಕೀಲೆ ಅನು ಚೆಂಗಪ್ಪ ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ದೂರುದಾರರಾದ ಬೆಂಗಳೂರಿನ ಧೀರಜ್ ರಖೇಜಾ ಅವರ ತಾಯಿಯು 2018ರ ಫೆಬ್ರವರಿ 24ರಂದು ಎಂದಿನಂತೆ ಸಾಕು ನಾಯಿಗಳನ್ನು ವಾಯು ವಿಹಾರಕ್ಕೆ ಕರೆದೊಯ್ದಿದ್ದರು. ಫಾರ್ಚೂನರ್ ಎಸ್‌ಯುವಿ ವಾಹನವು ಒಂದು ಸಾಕು ನಾಯಿಗೆ ಡಿಕ್ಕಿ ಹೊಡೆದಿತ್ತು. ದೂರುದಾರರ ಭಾವ ಮತ್ತು ಅಕ್ಕ ಸಾಕು ನಾಯಿ ʼಮೆಂಪಿʼಯನ್ನು ಪ್ರಾಣಿ ಆಸ್ಪತ್ರೆಗೆ ಕರೆದೊಯ್ದಿದ್ದರೂ ಅದು ಬದುಕಲಿಲ್ಲ. ಈ ಹಿನ್ನೆಲೆಯಲ್ಲಿ ವಿಜಯನಗರ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ಮೋಟಾರು ವಾಹನ ಕಾಯಿದೆ ಸೆಕ್ಷನ್ 134 (ಎ) ಮತ್ತು (ಬಿ) ಮತ್ತು 187, ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 279, 428, 429 ಪ್ರಕರಣ ದಾಖಲಾಗಿತ್ತು. ಇದನ್ನು ನ್ಯಾಯಾಲಯ ವಜಾ ಮಾಡಿದೆ.