Chief Justice Suresh Kumar Kait, Madhya Pradesh High Court (Jabalpur bench)  
ಸುದ್ದಿಗಳು

ಸಿಜೆ ಅಧಿಕೃತ ನಿವಾಸದಿಂದ ದೇಗುಲ ತೆರವು: ಆರೋಪ ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್

ವರದಿಗಳು ಸಂಪೂರ್ಣ ಸುಳ್ಳು, ತಪ್ಪುದಾರಿಗೆಳೆಯುವಂತಿದ್ದು ಆಧಾರರಹಿತವಾಗಿವೆ. ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ತಿಳಿಸಿದ್ದಾರೆ.

Bar & Bench

ತಮ್ಮ ಅಧಿಕೃತ ನಿವಾಸದ ಆವರಣದಲ್ಲಿದ್ದ ಹನುಮಾನ್‌ ದೇವರ ದೇಗುಲವನ್ನು ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸುರೇಶ್‌ ಕುಮಾರ್‌ ಕೈಟ್‌ ತೆರವುಗೊಳಿಸಿದ್ದಾರೆ ಎಂಬ ಆರೋಪವನ್ನು ಹೈಕೋರ್ಟ್‌ ರಿಜಿಸ್ಟ್ರಿ ನಿರಾಕರಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ರಿಜಿಸ್ಟ್ರಾರ್ ಜನರಲ್ ಧರ್ಮೇಂದ್ರ ಸಿಂಗ್ ಅವರು ಈ ಕುರಿತ ಎಲ್ಲಾ ಆರೋಪಗಳನ್ನು ಅಲಗಳೆದಿದ್ದು ವರದಿಗಳು ಸಂಪೂರ್ಣ ಸುಳ್ಳು, ತಪ್ಪುದಾರಿಗೆಳೆಯುವಂತಿದ್ದು ಆಧಾರರಹಿತವಾಗಿವೆ ಎಂದು ತಿಳಿಸಿದ್ದಾರೆ.

ತಮ್ಮ ಅಧಿಕೃತ ಬಂಗಲೆಯ ಆವರಣದಲ್ಲಿರುವ ದೇವಾಲಯ ತೆರವುಗೊಳಿಸಿದ ಮುಖ್ಯ ನ್ಯಾಯಮೂರ್ತಿ ಕೈಟ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರವೀಂದ್ರ ನಾಥ್ ತ್ರಿಪಾಠಿ ಎಂಬ ವಕೀಲರು  ರಾಷ್ಟ್ರಪತಿ, ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.

ದೇವಸ್ಥಾನ ದೀರ್ಘಕಾಲದಿಂದ ಸಿಜೆ ಅವರ ನಿವಾಸದ ಅಂಗಳದಲ್ಲಿಯೇ ಇತ್ತು. ಮುಸ್ಲಿಂ ಸಮುದಾಯಕ್ಕೆ ಸೇರಿದ ಸಿಜೆಯೊಬ್ಬರು ಬಂಗಲೆಯಲ್ಲಿ ವಾಸಿಸುತ್ತಿದ್ದಾಗಲೂ ದೇವಸ್ಥಾನ ಅಲ್ಲಿಯೇ ಇತ್ತು ಎಂಬುದು ಅರ್ಜಿದಾರರ ವಾದವಾಗಿತ್ತು.

ವಕೀಲರ ದೂರು ನೀಡಿರುವ ಬೆನ್ನಿಗೇ ಮಧ್ಯಪ್ರದೇಶ ಹೈಕೋರ್ಟ್‌ ವಕೀಲರ ಸಂಘ ಕೂಡ ಹೋರಾಟಕ್ಕಿಳಿದಿದ್ದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ಸಮಸ್ಯೆ ಬಗೆ ಹರಿಸಬೇಕು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿತ್ತು.

ಈ ಎಲ್ಲಾ ಆರೋಪಗಳನ್ನು ಈಗ ಹೈಕೋರ್ಟ್ ಆಡಳಿತ ನಿರಾಕರಿಸಿದೆ. ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಪತ್ರಿಕಾ ಟಿಪ್ಪಣಿಯ ಪ್ರಕಾರ, ಮುಖ್ಯ ನ್ಯಾಯಮೂರ್ತಿಗಳ ನಿವಾಸದಲ್ಲಿ ಯಾವುದೇ ದೇವಾಲಯ ಇರಲಿಲ್ಲ ಎಂಬುದನ್ನು ಲೋಕೋಪಯೋಗಿ ಇಲಾಖೆ ಕೂಡ  ಖಚಿತಪಡಿಸಿದೆ.

ಕೆಲ ಮಾಧ್ಯಮಗಳು ಮಾಡುತ್ತಿರುವ ಆರೋಪ ಕಪೋಲಕಲ್ಪಿತವಾಗಿದ್ದು ಸಾರ್ವಜನಿಕರನ್ನು ದಾರಿತಪ್ಪಿಸುವ ಉದ್ದೇಶ ಇದರ ಹಿಂದಿದೆ. ಇಂತಹ ಕೃತ್ಯಗಳು ನ್ಯಾಯಾಂಗ ವ್ಯವಸ್ಥೆಯ ಸಮಗ್ರತೆಯನ್ನು ಹಾಳುಮಾಡುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.