BJP MLA Madal Virupakshappa
BJP MLA Madal Virupakshappa 
ಸುದ್ದಿಗಳು

ಲಂಚ ಪ್ರಕರಣ: ಐದು ದಿನಗಳ ಲೋಕಾಯುಕ್ತ ಪೊಲೀಸ್‌ ಕಸ್ಟಡಿಗೆ ಮಾಡಾಳ್‌ ವಿರೂಪಾಕ್ಷಪ್ಪ

Bar & Bench

ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿಯ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ವಿಚಾರಣೆಗಾಗಿ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸ್‌ ಕಸ್ಟಡಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ನೀಡಿದೆ.

ಲೋಕಾಯುಕ್ತ ಪೊಲೀಸರು ಬಂಧಿತ ವಿರೂಪಾಕ್ಷಪ್ಪ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತಕುಮಾರ್‌ ಅವರ ಮುಂದೆ ಹಾಜರುಪಡಿಸಿದರು.

ಲೋಕಾಯುಕ್ತ ಪೊಲೀಸರನ್ನು ಪ್ರತಿನಿಧಿಸಿದ್ದ ವಕೀಲ ಸಂತೋಷ್‌ ನಗರಾಲೆ ಅವರು “ಈ ಹಿಂದೆ ಆರೋಪಿಯು ಸರಿಯಾದ ರೀತಿಯಲ್ಲಿ ತನಿಖೆಗೆ ಸಹಕರಿಸಿಲ್ಲ. ಅಲ್ಲದೇ, ಆರೋಗ್ಯದ ಸಮಸ್ಯೆ ಹೇಳಿರುವುದರಿಂದ ಹೆಚ್ಚು ಒತ್ತಡ ಹಾಕಿ ಅವರನ್ನು ತನಿಖೆಗೆ ಒಳಪಡಿಸಲಾಗದು. ಹೀಗಾಗಿ, ಆರೋಪಿಯನ್ನು ಹತ್ತು ದಿನಗಳ ಕಾಲ ವಿಚಾರಣೆಗಾಗಿ ಲೋಕಾಯುಕ್ತ ಪೊಲೀಸ್‌ ಕಸ್ಟಡಿಗೆ ನೀಡಬೇಕು” ಎಂದು ಕೋರಿದರು.

ಇದಕ್ಕೆ ವಿರೂಪಾಕ್ಷಪ್ಪ ಪರ ವಕೀಲರು ಆಕ್ಷೇಪಿಸಿದರು. ಈಗಾಗಲೇ ಹಲವು ಬಾರಿ ವಿರೂಪಾಕ್ಷಪ್ಪ ಅವರು ತನಿಖೆಗೆ ಹಾಜರಾಗಿದ್ದಾರೆ ಎಂದರು. ಅಲ್ಲದೇ, ಮನೆಯ ಆಹಾರ ಪೂರೈಸಲು ಮತ್ತು ಕುಟುಂಬ ಸದಸ್ಯರು ಆರೋಪಿ ಮಾಡಾಳ್‌ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿದರು.

ಇದಕ್ಕೆ ನಗರಾಲೆ ಅವರು ತೀವ್ರವಾಗಿ ಆಕ್ಷೇಪಿಸಿದರು. ಈ ಸಂಬಂಧ ಆದೇಶವನ್ನು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯವು ಏಪ್ರಿಲ್‌ 1ರವರೆಗೆ ಆರೋಪಿಯನ್ನು ತನಿಖೆಗಾಗಿ ಲೋಕಾಯುಕ್ತ ಪೊಲೀಸ್‌ ಕಸ್ಟಡಿಗೆ ನೀಡಿತು. ಆನಂತರ ಅಗತ್ಯತೆ ನೋಡಿಕೊಂಡು ಪೊಲೀಸ್‌ ಕಸ್ಟಡಿ ವಿಸ್ತರಿಸಲಾಗುವುದು ಎಂದು ನ್ಯಾಯಾಲಯವು ಲೋಕಾಯುಕ್ತ ಪರ ವಕೀಲರಿಗೆ ತಿಳಿಸಿತು.

ಕರ್ನಾಟಕ ಹೈಕೋರ್ಟ್‌ ಸೋಮವಾರ ಮಾಡಾಳ್‌ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡುತ್ತಿದ್ದಂತೆ ತುಮಕೂರಿನ ಸಮೀಪ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆ ಸೇರಿದಂತೆ ವಿವಿಧ ಪ್ರಕ್ರಿಯೆ ಮುಗಿಸಿ ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ (ಕೆಎಸ್‌ಡಿಎಲ್) ಕಚ್ಚಾ ತೈಲ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಮಾಡಾಳ್‌ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದು, ಅವರ ಪುತ್ರ ಎರಡನೇ ಆರೋಪಿಯಾಗಿದ್ದಾರೆ.

ವಿರೂಪಾಕ್ಷಪ್ಪ ಮತ್ತು ಪ್ರಶಾಂತ್‌ ವಿರುದ್ಧ ಭ್ರಷ್ಟಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 7(ಎ), 7ಬಿ ಅಡಿ ಪ್ರಕರಣ ದಾಖಲಿಸಲಾಗಿದ್ದು, ಸಿದ್ದೇಶ್‌, ನಿಕೋಲಸ್‌ ಮತ್ತು ಗಂಗಾಧರ್‌ ಇತರೆ ಮೂವರು ಆರೋಪಿಗಳಾಗಿದ್ದಾರೆ. ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.