ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ನಿವೇಶನ ಮಂಜೂರು ಮಾಡಿದ್ದ ಆರೋಪದಲ್ಲಿ ಮುಡಾದ ಮಾಜಿ ಆಯುಕ್ತ ಡಾ. ಡಿ ಬಿ ನಟೇಶ್‌ಗೆ ಜಾರಿ ಮಾಡಿದ್ದ ಸಮನ್ಸ್ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದಿಂದ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ಅವರನ್ನು ವಿಚಾರಣೆಗೊಳಪಡಿಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಾರಿ ನಿರ್ದೇಶನಾಲಯವು ವಿಭಾಗೀಯ ಪೀಠದ ಮುಂದೆ ಬುಧವಾರ ವಾದಿಸಿದೆ.
ಮುಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿದ್ದ ಆರೋಪದಲ್ಲಿ ಮುಡಾದ ಮಾಜಿ ಆಯುಕ್ತ ನಟೇಶ್‌ಗೆ ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು “ನಟೇಶ್ ಪ್ರಕರಣದಲ್ಲಿ ಏಕ ಸದಸ್ಯ ಪೀಠ ನೀಡಿರುವ ಆದೇಶವು ಜಾರಿ ನಿರ್ದೇಶನಾಲಯದ ಇತರೆ ಪ್ರಕರಣಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಆದೇಶವನ್ನು ಇತರೆ ಪ್ರಕರಣಗಳಲ್ಲಿಯೂ ಉಲ್ಲೇಖಿಸಲಾಗುತ್ತಿದ್ದು, ಇ ಡಿ ತನ್ನ ಕೆಲಸ ಮಾಡುವುದಕ್ಕೆ ಕಷ್ಟ ಸಾಧ್ಯವಾಗಿದೆ. ಇ ಡಿ ಶೋಧನೆ ಮಾಡುವುದು ಕಾನೂನು ಬಾಹಿರ ಎಂದು ಘೋಷಣೆ ಮಾಡಿದರೆ ಇದೇ ಪ್ರಕರಣದ ಇತರೆ ಆರೋಪಿಗಳ ಮೇಲೆ ಪರಿಣಾಮ ಉಂಟಾಗಲಿದ್ದು, ಅವರಿಗೆ ನ್ಯಾಯಾಲಯಗಳು ಜಾಮೀನು ಮಂಜೂರು ಮಾಡಬಹುದಾಗಿದೆ” ಎಂದು ತಿಳಿಸಿದರು.
ಆಗ ಪೀಠವು “ಎಷ್ಟು ಮಂದಿ ಆರೋಪಿಗಳಿದ್ದಾರೆ” ಎಂದು ಪ್ರಶ್ನಿಸಿತು. ಇದಕ್ಕೆ ರಾಜು ಅವರು “ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳಿದ್ದಾರೆ. ಪ್ರಕರಣದ ಎರಡನೇ ಆರೋಪಿಗೂ ಇ ಡಿ ಸಮನ್ಸ್ ಜಾರಿ ಮಾಡಿದ್ದು, ಅದನ್ನು ಹೈಕೋರ್ಟ್ ರದ್ದುಪಡಿಸಿದೆ” ಎಂದರು.
ಮುಂದುವರಿದು, “ಏಕಸದಸ್ಯ ಪೀಠದ ಆದೇಶದಲ್ಲಿ ಪ್ರಮುಖವಾಗಿ ಎರಡು ಅಂಶಗಳಿದ್ದು, ಈ ಆದೇಶ ಇಡೀ ದೇಶಕ್ಕೆ ಅನ್ವಯವಾಗಲಿದೆ. ಆರೋಪಿಗಳಿಗೆ ಜಾಮೀನು ನೀಡುವುದನ್ನು ವಿರೋಧಿಸಲು ಜಾರಿ ನಿರ್ದೇಶನಾಲಯಕ್ಕೆ ಅವಕಾಶ ಇಲ್ಲದಂತಾಗಲಿದೆ. ಇದು ಸುಪ್ರೀಂ ಕೋರ್ಟ್ ಆದೇಶಗಳಿಗೆ ವಿರುದ್ಧ” ಎಂದು ವಿವರಿಸಿದರು.
“ಇ ಡಿ ಸಮನ್ಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ನಟೇಶ್, ಮುಡಾದ ಆಯುಕ್ತರಾಗಿದ್ದಾಗ ಸ್ವತಃ ಬದಲಿ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ ವೈಯಕ್ತಿಕವಾಗಿ ಪರಿಶೀಲನೆ ನಡೆಸಿದ್ದರು. ನಿಯಮಗಳನ್ನು ಮೀರಿ ಪ್ರಭಾವಿಗಳಿಗೆ ನಿವೇಶನ ಹಂಚಿಕೆ ಮಾಡಿದ್ದು, ಇದು ಮೇಲ್ನೋಟಕ್ಕೆ ಅಕ್ರಮ ಹಣ ವರ್ಗಾವಣೆಗೆ ಕಾರಣವಾಗಿರಬಹುದಾಗಿದೆ. 56 ಕೋಟಿ ರೂಪಾಯಿಗಳ ಅಕ್ರಮ ವರ್ಗಾವಣೆಯಾಗಿದ್ದು, ನಟೇಶ್ ನಡೆ ಸಂಶಯಕ್ಕೆ ಕಾರಣವಾಗಿದೆ. ಈ ರೀತಿಯ ಆರೋಪಗಳಲ್ಲಿ ಮೊದಲ ಹಂತದಲ್ಲಿ ಅವರ ಆಸ್ತಿಗಳ ಮೇಲೆ ದಾಳಿ ಮಾಡಿ ಶೋಧನಾ ಕಾರ್ಯ ನಡೆಯಲಿದ್ದು, ಬಳಿಕ ಬಂಧನಕ್ಕೆ ಮುಂದಾಗಬೇಕಾಗುತ್ತದೆ. ಆದರೆ, ಏಕಸದಸ್ಯ ಪೀಠ, ಹಸ್ತಕ್ಷೇಪ ಮಾಡಿದೆ. ಇದು ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ವಿರುದ್ಧ” ಎಂದು ತಿಳಿಸಿದರು.
“ಮುಡಾದಲ್ಲಿ ಹಗರಣ ನಡೆದ ಸಂದರ್ಭದಲ್ಲಿ ನಟೇಶ್ ಆಯುಕ್ತರಾಗಿದ್ದರು. ಅವರ ಮನೆ ಮೇಲೆ ದಾಳಿ ಮಾಡಿದಾಗ ದಾಖಲೆಗಳು ಪತ್ತೆಯಾಗಿಲ್ಲ ಎಂದು ಅನುಮಾನಿಸುವುದು ತಪ್ಪಾಗಲಿದೆಯೇ? ಅವರ ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್ ಜಾರಿ ಮಾಡಿರುವುದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.
ನಟೇಶ್ ಪರ ಹಿರಿಯ ವಕೀಲ ದುಶ್ಯಂತ್ ದವೆ ಅವರು “ಕಾನೂನು ಬಾಹಿರವಾಗಿ ನಟೇಶ್‌ಗೆ ಇ ಡಿ ಜಾರಿ ಮಾಡಿದ್ದ ಸಮನ್ಸ್ ರದ್ದುಪಡಿಸಿರುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿದ್ದು, ಕಾನೂನು ಬದ್ಧವಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಸರ್ಕಾರಗಳ ಯಾವುದೇ ಆದೇಶವನ್ನು ಪರಿಶೀಲಿಸುವುದು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಅವಕಾಶವಿದೆ. ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರು ಸಿಎಂ ಪತ್ನಿ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಯಾವುದೇ ಆರೋಪವಿಲ್ಲ. ಆದರೂ ನಟೇಶ್ ಮನೆ ಮೇಲೆ ದಾಳಿ ನಡೆಸಿ ಸಮನ್ಸ್ ಜಾರಿ ಮಾಡಿರುವುದು ಕಾನೂನು ಬಾಹಿರ” ಎಂದರು.
“ಮುಖ್ಯಮಂತ್ರಿಗಳ ಪತ್ನಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಶಾಸನ ಬದ್ಧ ಯೋಜನೆಯಿಂದಾಗಿದೆ. ಇದೇ ರೀತಿಯ ಇತರೆ 11 ಪ್ರಕರಣಗಳಲ್ಲಿ ಮುಡಾ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಯಾವುದೇ ಅಕ್ರಮವಿಲ್ಲದಿದ್ದರೂ, ಇ ಡಿ ಮುಖ್ಯಮಂತ್ರಿಗಳ ಪತ್ನಿ ಸೇರಿ ಹಲವರಿಗೆ ಸಮನ್ಸ್ ಜಾರಿ ಮಾಡಿದೆ” ಎಂದು ವಿವರಿಸಿದರು.
“ಲೋಕಾಯುಕ್ತ ಪೊಲೀಸರ ದಾಖಲಿಸಿದ್ದ ಎಫ್‌ಐಆರ್ ಆಧಾರದಲ್ಲಿ ಪಿಎಂಎಲ್‌ಎ ಕಾಯಿದೆಯಡಿ ಇ ಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಕಾಯಿದೆಯನ್ನು ಎಲ್ಲ ಪ್ರಕರಣಗಳಲ್ಲಿಯೂ ಬಳಸಲಾಗುತ್ತಿದೆ. ಅಲ್ಲದೇ, ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ 14 ನಿವೇಶನಗಳಲ್ಲಿ ಹಿಂದಿರುಗಿಸಿದ್ದು, ಅದರಲ್ಲಿ ಅಕ್ರಮದ ಆದಾಯ ಏನು ಎಂಬುದೇ ಗೊತ್ತಿಲ್ಲ. ಇದೊಂದು ಮುಡಾ ನಿರ್ಣಯವಾಗಿದ್ದು, ಅದನ್ನು ಕ್ರಿಮಿನಲ್ ಚಟುವಟಿಕೆ ಎನ್ನಲಾಗುವುದೇ? ಎಂದು ಪ್ರಶ್ನಿಸಿದರು.
ವಾದ ಆಲಿಸಿದ ಪೀಠವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.