CM Siddaramaiah, MUDA, Bengaluru City Civil Court 
ಸುದ್ದಿಗಳು

ಮುಡಾ ಪ್ರಕರಣ: ಲೋಕಾಯುಕ್ತ ಹಿಂದೆ ಸಲ್ಲಿಸಿರುವ ವರದಿ ಆಧರಿಸಿ ವಿಚಾರಣೆ ಮುಂದುವರಿಕೆ ಇಂಗಿತ ವ್ಯಕ್ತಪಡಿಸಿದ ನ್ಯಾಯಾಲಯ

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ವಿಚಾರಣೆ ನಡೆಸಿದರು.

Bar & Bench

ಮುಡಾ ನಿವೇಶನ ಹಂಚಿಕೆ ಅಕ್ರಮ ಹಗರಣದ ಮುಂದುವರಿದ ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಸಲ್ಲಿಸದ ಕಾರಣ, ಈ ಹಿಂದೆ ಸಲ್ಲಿಸಲಾಗಿರುವ ವರದಿಯ ಆಧಾರದಲ್ಲಿ ವಿಚಾರಣೆ ಮುಂದುವರಿಸಬೇಕಾಗುತ್ತದೆ ಎಂದು ಜನಪ್ರತಿ‌ನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಹೇಳಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ವಿಚಾರಣೆ ನಡೆಸಿದರು.

ಕೆಲ ಕಾಲ ಖಾಸಗಿ ದೂರನ್ನು ಆಲಿಸಿದ ನ್ಯಾಯಾಲಯವು ಪ್ರಕರಣದ ಕಳೆದ ವಿಚಾರಣೆ ವೇಳೆ ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ತನಿಖಾಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ತನಿಖೆ ಪೂರ್ಣಗೊಳ್ಳದ ಕಾರಣ ಹಾಗೂ ಹೆಚ್ಚಿನ ತನಿಖೆ ನಡೆಸಲು ತನಿಖಾಧಿಕಾರಿಗಳು ಮನವಿ ಮಾಡಿದ್ದರಿಂದ ಪ್ರಕರಣದಲ್ಲಿ 1ರಿಂದ 4ನೇ ಆರೋಪಿಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಬಿ ವರದಿಯ ಕುರಿತು ಯಾವುದೇ ಆದೇಶ ಹೊರಡಿಸುವುದನ್ನು ಈ ನ್ಯಾಯಾಲಯವು ಮುಂದೂಡುತ್ತಾ ಬಂದಿದೆ. ಆದರೆ, ಕೋರ್ಟ್ ನಿರ್ದೇಶನದ ಹೊರತಾಗಿಯೂ ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ತನಿಖಾ ಸಂಸ್ಥೆ ಸಲ್ಲಿಸದಿರುವ ಕಾರಣ, ಈಗಾಗಲೇ ಸಲ್ಲಿಸಲಾಗಿರುವ ವರದಿ ಆಧಾರದಲ್ಲಿ ವಿಚಾರಣೆ ಮುಂದುವರಿಯಬೇಕಾಗುತ್ತದೆ. ಆದ್ದರಿಂದ, ಮುಂದಿನ ವಿಚಾರಣೆಯ ದಿನಾಂಕ ಅಥವಾ ಅದಕ್ಕೂ ಮೊದಲು ಕೇಸ್ ಡೈರಿ (ಸಿಡಿ) ಕಡತಗಳನ್ನು ಒದಗಿಸಬೇಕು ಎಂದು ಲೋಕಾಯುಕ್ತ ಎಸ್‌ಪಿಪಿ‌ಗೆ ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಲೋಕಾಯುಕ್ತ ಎಸ್‌ಪಿಪಿ ವೆಂಕಟೇಶ್‌ ಅರಬಟ್ಟಿ ಅವರು ಪ್ರಕರಣದ ತನಿಖೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಪ್ರಕರಣದಲ್ಲಿ ಕೆಲ ಅಗತ್ಯ ಪೂರ್ವಾನುಮತಿ ಆದೇಶ ಪಡೆಯಬೇಕಿದ್ದು, ತನಿಖೆಯು ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪಿಸಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾದ 1ರಿಂದ 4ನೇ ಆರೋಪಿಗಳ (ಸಿದ್ದರಾಮಯ್ಯ, ಬಿ ಎಂ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ಜೆ ದೇವರಾಜು) ವಿರುದ್ಧ ಬಿ ವರದಿ ಸಲ್ಲಿಸುವ ಬಗ್ಗೆ ಇದುವರೆಗೆ ಯಾವುದೇ ಹೆಚ್ಚಿನ ತನಿಖೆ ನಡೆಸಲಾಗಿಲ್ಲ. ತನಿಖಾ ಸಂಸ್ಥೆಯು ಪ್ರಕರಣವನ್ನು ಸತತವಾಗಿ ವಿಳಂಬ ಮಾಡುತ್ತಿದೆ ಎಂದರು.

ಇದನ್ನು ನಿರಾಕರಿಸಿದ ಅರಬಟ್ಟಿ ಅವರು ವರದಿಯ ಅಂತಿಮ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಒದಗಿಸಲು ಸಿದ್ಧರಿದ್ದೇವೆ ಮತ್ತು ಅವುಗಳ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಲು ಕೇಸ್ ಡೈರಿ ಕಡತಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿದರು.

ದಿನೇಶ್ ಕುಮಾರ್ ನ್ಯಾಯಾಂಗ ಬಂಧನ ವಿಸ್ತರಣೆ: ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುಡಾ ಮಾಜಿ ಆಯುಕ್ತ ಜಿ ಟಿ ದಿನೇಶ್‌ ಕುಮಾರ್‌ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸುವಂತೆ ತನಿಖಾಧಿಕಾರಿಗಳು ಮಾಡಿದ ಮನವಿ ಪರಿಗಣಿಸಿದ ನ್ಯಾಯಾಲಯವು ದಿನೇಶ್ ಕುಮಾರ್ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿತು.