CM Siddaramaiah, MUDA, Bengaluru City Civil Court 
ಸುದ್ದಿಗಳು

[ಮುಡಾ] ಸಿಎಂ ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರು: ವಿಚಾರಣೆ ಅಂಗೀಕಾರದ ಕುರಿತು ಆದೇಶ ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

“ವ್ಯಕ್ತಿ ಪ್ರಭಾವಿ ಎಂದು ತೋರಿಸೋಕೆ ಎಲ್ಲಾ ಕಡೆ ಚಿನ್ನದ ಚೈನ್ ಹಾಕಿಕೊಂಡು ಹೋಗಬೇಕಿಲ್ಲ. ಸಿದ್ದರಾಮಯ್ಯ ಮೂರು ಬಾರಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಪತಿ ಅಧಿಕಾರದಲ್ಲಿರುವುದರಿಂದ ಪತ್ನಿ ಅಕ್ರಮ ಗಳಿಕೆ ಮಾಡಿದ್ದಾರೆ” ಎಂಬುದು ಅರ್ಜಿದಾರರ ವಾದ.

Bar & Bench

ಮುಡಾದಲ್ಲಿ ಮುಖ್ಯಮಂತ್ರಿ ಪತ್ನಿ ಬಿ ಎಂ ಪಾರ್ವತಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸುವುದರ ಬಗೆಗಿನ ಆದೇಶವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಕಾಯ್ದಿರಿಸಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಜನ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ನಡೆಸಿದರು.

ಅರ್ಜಿದಾರ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಆಕ್ಷೇಪಾರ್ಹವಾದ 3.16 ಗುಂಟೆ ಜಮೀನು ಮಾರಾಟ ಮಾಡುವ ಅಧಿಕಾರವೇ ಜೆ ದೇವರಾಜುಗೆ ಇಲ್ಲ” ಎಂದರು.

“ದೇವರಾಜುವಿನಿಂದ ಮಲ್ಲಿಕಾರ್ಜುನ ಸ್ವಾಮಿಗೆ 2004ರಲ್ಲಿ ಕ್ರಯಪತ್ರವಾಗಿಲ್ಲ. ಆದರೆ, ಮಲ್ಲಿಕಾರ್ಜುನ ಸ್ವಾಮಿ ಅವರು ಪಾರ್ವತಿ ಅವರಿಗೆ ದಾನ ಮಾಡುತ್ತಾರೆ. ಅಭಿವೃದ್ಧಿಪಡಿಸಿರುವ ಜಾಗ ಕೃಷಿ ಭೂಮಿ ಹೇಗೆ ಆಗುತ್ತದೆ. ಬಡಾವಣೆಗಾಗಿ ಮಾರ್ಪಾಡು ಮಾಡಿರುವ ಭೂಮಿಯು ಕೃಷಿ ಭೂಮಿ ಹೇಗೆ ಆಗುತ್ತದೆ. ಇದಲ್ಲಾ ಆದ ಬಳಿಕ ಸಿ ಎಂ ಪತ್ನಿ ಪಾರ್ವತಿ ಅವರು ಬದಲಿ ನಿವೇಶನಕ್ಕೆ ಮನವಿ ಸಲ್ಲಿಸಿದ್ದರು. ಇಲ್ಲಿ ದೇವರಾಜು, ಮಲ್ಲಿಕಾರ್ಜುನ ಸ್ವಾಮಿ, ಪಾವರ್ತಿ ಅವರಾರಿಗೂ ಹಕ್ಕು (ಟೈಟಲ್‌) ಇರುವುದಿಲ್ಲ. ಹಕ್ಕು ಇಲ್ಲದಿರುವ ಭೂಮಿಗೆ ಪರಿಹಾರ ಕೋರಿದ್ದಾರೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಆಕ್ಷೇಪಿಸಿದರು.

“50:50 ಯೋಜನೆಯಡಿ ಬದಲಿ ನಿವೇಶನ ಮಂಜೂರು ಮಾಡಲು ಮುಡಾ ಅಯುಕ್ತರು ನಿರ್ಧಾರ ಮಾಡುತ್ತಾರೆ. ಒಂದೊಮ್ಮೆ ಪಾರ್ವತಿ ಅವರಿಗೆ ಹಕ್ಕು ಇದ್ದರೂ ಅವರು 4,800 ಚದರ ಅಡಿ ಮಾತ್ರ ಪಡೆಯಲು ಅವಕಾಶ ಇದೆ. ಅದು ಕೂಡ ಸ್ವಾಧೀನ ಆಗಿರುವ ಅದೇ ಲೇಔಟ್ ನಲ್ಲಿ ಪಡೆಯಬಹುದು. ಇಲ್ಲಿ ಪಾವರ್ತಿ ಅವರಿಗೆ ಬದಲಿ ನಿವೇಶನ ಮಂಜೂರು ಮಾಡಲು 2005ರ 50:50 ನಿಯಮ ಬಳಕೆ ಮಾಡಲಾಗಿದೆ. ಅಲ್ಲದೇ, ವಿಶೇಷ ಬಡಾವಣೆಯಲ್ಲಿ ಬದಲಿ ನಿವೇಶನ ಮಂಜೂರು ನೀಡಲು ಆಯುಕ್ತರು ನಿರ್ಧಾರ ಮಾಡಿದ್ದಾರೆ. ಸಿಎಂ ಹೇಳಿರುವ ಪ್ರಕಾರ ಅದು ಕೃಷಿ ಭೂಮಿಯಾಗಿರುವುದರಿಂದ ಪಾರ್ವತಿ ಅವರು ಹಕ್ಕು ಹೊಂದಿದ್ದರೆ ಎರಡು ನಿವೇಶನ ಮಾತ್ರ ನೀಡಬಹುದಿತ್ತು. ಆದರೆ, 38 ಸಾವಿರ ಚದರ ಅಡಿ ಪಡೆಯಲು ಹೇಗೆ ಸಾಧ್ಯ? ಪಾರ್ವತಿ ಅವರಿಗೆ ಮಾಲೀಕತ್ವದ ಹಕ್ಕು ಇಲ್ಲದಿರುವುದರಿಂದ ಇದು ಶುದ್ಧ ಹಗರಣವಾಗಿದೆ. ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಪಡೆಯಲಾಗಿದೆ” ಎಂದು ವಾದಿಸಿದರು.

ಇನ್ನು ರಾಜ್ಯಪಾಲರ ಪೂರ್ವಾನುಮತಿಗೆ ಸಂಬಂಧಿಸಿದಂತೆ “ಪ್ರಕರಣದಲ್ಲಿ ಸಂಜ್ಞೇಯ ಪರಿಗಣಿಸುವಾಗ ರಾಜ್ಯಪಾಲರ ಪೂರ್ವಾನುಮತಿ ಅಗತ್ಯವಿರುವುದಿಲ್ಲ. ಸಿಸಿ ನಂಬರ್‌ ಮಾಡುವಾಗ ಬೇಕಾಗುತ್ತದೆ. ಇದಕ್ಕೂ, ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಹೀಗಾಗಿ, ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಬೇಕು. ಪ್ರಕರಣವು ಸಂಜ್ಞೇಯಪೂರ್ವ ಹಂತದಲ್ಲಿದ್ದು, ಸದ್ಯಕ್ಕೆ ರಾಜ್ಯಪಾಲರ ಪೂರ್ವಾನುಮತಿ ಬೇಕಿಲ್ಲ. ಹೀಗಾಗಿ, ನ್ಯಾಯಾಲಯ ವಿಚಾರಣೆಗೆ ಪರಿಗಣಿಸಬಹುದು. ಪ್ರಕರಣ ದಾಖಲಾದ ನಂತರ ತನಿಖಾಧಿಕಾರಿಗೆ ಅನುಮಾನಗಳಿದ್ದರೆ ವಿಶೇಷ ನ್ಯಾಯಾಲಯದ ಸಲಹೆ ಪಡೆದು ಮುಂದುವರಿಯಲು ಅವಕಾಶವಿದೆ” ಎಂದಿದ್ದಾರೆ.

“ಪಾರ್ವತಿ ಅವರಿಗೆ ಪರ್ಯಾಯ ನಿವೇಶನ ನೀಡುವ ಸಂದರ್ಭವೇ ಇಲ್ಲ. ಆದರೂ ಸಂಪೂರ್ಣ ಅಭಿವೃದ್ಧಿಯಾಗಿರುವ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬೀರಿದ್ದಾರೆ. ಒಬ್ಬ ವ್ಯಕ್ತಿ ಪ್ರಭಾವಿ ಎಂದು ತೋರಿಸೋಕೆ ಎಲ್ಲಾ ಕಡೆ ಚಿನ್ನದ ಚೈನ್ ಹಾಕಿಕೊಂಡು ಹೋಗಬೇಕಿಲ್ಲ. ಸಿದ್ದರಾಮಯ್ಯ ಅವರು ಮೂರು ಬಾರಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಪತಿ ಅಧಿಕಾರದಲ್ಲಿರುವುದರಿಂದ ಪತ್ನಿ ಅಕ್ರಮವಾಗಿ ಗಳಿಕೆ ಮಾಡಿದ್ದಾರೆ” ಎಂದು ವಾದಿಸಿದರು. ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್‌ 13ಕ್ಕೆ ಮುಂದೂಡಿದೆ.