ED and Karnataka HC 
ಸುದ್ದಿಗಳು

ಮುಡಾ ಹಗರಣ: ಆತುರದ ಕ್ರಮಕ್ಕೆ ಮುಂದಾಗದಂತೆ ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದ ಆದೇಶ ವಿಸ್ತರಿಸಿದ ಹೈಕೋರ್ಟ್‌

ಹಿಂದಿನ ಮುಡಾ ಆಯುಕ್ತ ಜಿ ಟಿ ದಿನೇಶ್‌ ಕುಮಾರ್ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ಪೀಠವು ಅರ್ಜಿಯನ್ನು ವಿಚಾರಣಾ ಯೋಗ್ಯತೆಯ ಆಧಾರದಡಿ ವಿಲೇವಾರಿ ಮಾಡುವುದಾಗಿ ತಿಳಿಸಿ ವಿಚಾರಣೆಯನ್ನು ಮಾರ್ಚ್‌ 14ಕ್ಕೆ ಮುಂದೂಡಿತು.

Bar & Bench

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ದಟ್ಟಗಳ್ಳಿಯಲ್ಲಿರುವ ಜಮೀನನ್ನು ಜಾರಿ ನಿರ್ದೇಶನಾಲಯ (ಇ ಡಿ) ಜಪ್ತಿ ಮಾಡಿದ್ದು, ಸದ್ಯ ಈ ಕುರಿತು ಯಾವುದೇ ಆತುರದ ಕ್ರಮಕ್ಕೆ ಮುಂದಾಗಬಾರದು ಎಂದು ಇ ಡಿಗೆ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಿಸ್ತರಿಸಿದೆ.

ಮೈಸೂರು ವಿದ್ಯಾರಣ್ಯಪುರಂನಲ್ಲಿರುವ ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದ ಕಾರ್ಯದರ್ಶಿ ಭೋಜರಾಜ ಅವರು ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ ಸೋಮಶೇಖರ್‌ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲರಾದ ಎಸ್‌ ಎಸ್ ನಾಗಾನಂದ ಮತ್ತು ಡಿ ಆರ್ ರವಿಶಂಕರ್‌ ವಾದ ಮಂಡಿಸಿದರು. ಇ ಡಿ ಪರ ಹಾಜರಿದ್ದ ಮಧುಕರ ದೇಶ‍‍ಪಾಂಡೆ ಅವರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು.

ಇದೇ ವೇಳೆ ಮುಡಾದ ಹಾಲಿ ಆಯುಕ್ತ ಎ ಎನ್‌ ರಘುನಂದನ ಪರ ವಕೀಲ ಸಿ ಪಿ ವಿವೇಕಾನಂದ ಅವರು ವಕಾಲತ್ತು ಸಲ್ಲಿಸಿದರು. ಅಂತೆಯೇ, ಈ ಹಿಂದಿನ ಮುಡಾ ಆಯುಕ್ತ ಜಿ ಟಿ ದಿನೇಶ್‌ ಕುಮಾರ್ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ಪೀಠವು ಅರ್ಜಿಯನ್ನು ವಿಚಾರಣಾ ಯೋಗ್ಯತೆಯ ಆಧಾರದಡಿ ವಿಲೇವಾರಿ ಮಾಡುವುದಾಗಿ ತಿಳಿಸಿ ವಿಚಾರಣೆಯನ್ನು ಮಾರ್ಚ್‌ 14ಕ್ಕೆ ಮುಂದೂಡಿತು.

ಮುಡಾದಿಂದ ನಿವೇಶನ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆ ಮಾಡಿಲ್ಲ ಎಂದು ಚಾಮುಂಡೇಶ್ವರಿ ನಗರ ಸರ್ವೋದಯ ಸಂಘವು ಪ್ರಾಧಿಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ.