Mukul Rohatgi 
ಸುದ್ದಿಗಳು

ಹಿರಿಯ ವಕೀಲ ಮುಕುಲ್ ರೋಹಟ್ಗಿ ಭಾರತದ ಮುಂದಿನ ಅಟಾರ್ನಿ ಜನರಲ್

ರೋಹಟ್ಗಿ ಅವರು ಎರಡನೇ ಬಾರಿಗೆ ಎಜಿ ಹುದ್ದೆ ಅಲಂಕರಿಸುತ್ತಿದ್ದಾರೆ. ಅವರು 2014ರಿಂದ 2017ರ ಅವಧಿಯಲ್ಲಿ ಈ ಸ್ಥಾನಕ್ಕೇರಿದ್ದರು.

Bar & Bench

ಭಾರತದ ಹದಿನಾಲ್ಕನೇ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ. ಕೆ ಕೆ ವೇಣುಗೋಪಾಲ್ ಅವರಿಂದ ಶೀಘ್ರವೇ ತೆರವಾಗಲಿರುವ ಹುದ್ದೆಯನ್ನು ರೋಹಟ್ಗಿ ಅಲಂಕರಿಸಲಿದ್ದಾರೆ.

ರೋಹಟ್ಗಿ ಅವರು ಎರಡನೇ ಬಾರಿಗೆ ಎಜಿ ಹುದ್ದೆ ಅಲಂಕರಿಸುತ್ತಿದ್ದಾರೆ. ಅವರು 2014ರಿಂದ 2017ರ ಅವಧಿಯಲ್ಲಿ ಈ ಸ್ಥಾನಕ್ಕೇರಿದ್ದರು. ಕೆ ಕೆ ವೇಣುಗೋಪಾಲ್ ಅವರು ಈ ಸೆಪ್ಟೆಂಬರ್ 30ರ ನಂತರ ತಮ್ಮನ್ನು ಹುದ್ದೆಯಲ್ಲಿ ಮುಂದುವರೆಸಬಾರದು ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು.

ಕಳೆದ ಜೂನ್‌ನಲ್ಲಿ ಎ ಜಿ ವೇಣುಗೋಪಾಲ್‌ ಅವರ ಅಧಿಕಾರಾವಧಿಯನ್ನು ಮೂರು ತಿಂಗಳ ಅವಧಿಗೆ ಇಲ್ಲವೇ ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿತ್ತು. ಇದೇ ಸೆ. 30ಕ್ಕೆ ಈ ಅವಧಿ ಕೊನೆಗೊಳ್ಳಲಿದೆ.

ವೇಣುಗೋಪಾಲ್ ಅವರನ್ನು ಮೂರು ವರ್ಷಗಳ ಅವಧಿಗೆ ಜುಲೈ 1, 2017ರಂದು ಅಟಾರ್ನಿ ಜನರಲ್ ಆಗಿ ನೇಮಿಸಲಾಗಿತ್ತು. ನಂತರ ಅದನ್ನು ಪ್ರತಿ ವರ್ಷಕ್ಕೊಮ್ಮೆಯಂತೆ ಎರಡು ಬಾರಿ ವಿಸ್ತರಿಸಲಾಗಿತ್ತು.