ಮುಲ್ಲಪೆರಿಯಾರ್ ಅಣೆಕಟ್ಟು ಪ್ರಕರಣದ ಪಕ್ಷಕಾರರು ಈ ಪ್ರಕರಣವನ್ನು ಪ್ರತಿಕೂಲ ವ್ಯಾಜ್ಯವೆಂದು ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಪ್ರಕರಣದ ಪ್ರಾಥಮಿಕ ಉದ್ದೇಶ, ಅಣೆಕಟ್ಟಿನ ಕೆಳಹಂತದಲ್ಲಿ ವಾಸಿಸುವ ಜನರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದಾಗಿದೆ ಎಂದು ಅದು ವಿವರಿಸಿದೆ [ ಡಾ. ಜೋ ಜೋಸೆಫ್ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣ].
ನೀರಿನ ಮಟ್ಟ ನಿರ್ವಹಣೆ ಮತ್ತು ಅಣೆಕಟ್ಟಿನ ಸೋರಿಕೆ ಕುರಿತ ನಿರ್ವಹಣಾತ್ಮಕ ಸಮಸ್ಯೆಗಳನ್ನು ತಜ್ಞರ ಸಮಿತಿ ಪರಿಶೀಲಿಸಲಿದ್ದು ನ್ಯಾಯಾಲಯ ಆ ವಿಚಾರಕ್ಕೆ ಹೋಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತಿಳಿಸಿದೆ.
"ಇದು ಪ್ರತಿಕೂಲ ದಾವೆಯಲ್ಲ, ಅಣೆಕಟ್ಟಿನ ನಿರ್ವಹಣೆ ವಿಚಾರಕ್ಕಾಗಿ ನಾವು ಇಲ್ಲಿ ಕುಳಿತಿಲ್ಲ. ಇದು ಅಲ್ಲಿ ವಾಸಿಸುವ ಜನರ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿದೆ. ನಾವು ಅದರ ವಿಚಾರಣೆಯಲ್ಲಿದ್ದೇವೆ" ಎಂದು ನ್ಯಾ. ಖಾನ್ವಿಲ್ಕರ್ ಹೇಳಿದರು.
ನ್ಯಾಯಾಲಯ ವಿಚಾರಣೆ ನಡೆಸಬೇಕಾದ ಅತಿ ಮುಖ್ಯ ಅಂಶಗಳನ್ನು ಗುರುತಿಸಲು ವಿವಿಧ ಪಕ್ಷಕಾರರ ಪರ ವಕೀಲರು ಜಂಟಿ ಸಭೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದ ಪೀಠ ಅವರು ಸಹಮತ ಮತ್ತು ಭಿನ್ನಾಭಿಪ್ರಾಯವಿರುವ ಅಂಶಗಳನ್ನು ಸ್ಪಷ್ಟಪಡಿಸಿ ನ್ಯಾಯಾಲಯಕ್ಕೆ ತಿಳಿಸುತ್ತಾರೆ ಎಂದಿತು.
ಬಳಿಕ ಫೆಬ್ರವರಿ 4ರೊಳಗೆ ತಮ್ಮ ಲಿಖಿತ ಟಿಪ್ಪಣಿ ಸಲ್ಲಿಸುವಂತೆ ವಕೀಲರುಗಳಿಗೆ ನಿರ್ದೇಶಿಸಿದ ನ್ಯಾಯಾಲಯ ಫೆಬ್ರವರಿ ಎರಡನೇ ವಾರಕ್ಕೆ ಪ್ರಕರಣವನ್ನು ವಿಚಾರಣೆಗಾಗಿ ಪಟ್ಟಿ ಮಾಡಿತು. ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆಗೆ ಸಂಬಂಧಿಸಿದ ವಿಚಾರ ನೋಡಿಕೊಳ್ಳಲು ನ್ಯಾಯಾಲಯ ನೇಮಿಸಿದ ಮೇಲ್ವಿಚಾರಣಾ ಸಮಿತಿ ʼನಿಷ್ಕ್ರಿಯʼವಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.