Mekedatu Dam, Map, SupremeCourt

 
ಸುದ್ದಿಗಳು

ʼಮೇಕೆದಾಟುʼ ವಿಚಾರಣೆ ಜ. 25ಕ್ಕೆ: ಮುಲ್ಲಪೆರಿಯಾರ್‌ ದಾವೆ ವಿಚಾರಣೆಯಿಂದ ಪ್ರಕರಣ ಬೇರ್ಪಡಿಸಿದ ಸುಪ್ರೀಂಕೋರ್ಟ್‌

ಸುಪ್ರೀಂಕೋರ್ಟ್ ಪ್ರಕರಣವನ್ನು ಮಂಗಳವಾರ ನಡೆಯಬೇಕಿದ್ದ ಮುಲ್ಲಪೆರಿಯಾರ್ ಪ್ರಕರಣದೊಂದಿಗೆ ಪಟ್ಟಿ ಮಾಡಿತ್ತು. ಹೀಗಾಗಿ ರಾಜ್ಯದ ವಿವಿಧ ಮಾಧ್ಯಮಗಳು ಪ್ರಕರಣದ ವಿಚಾರಣೆ ಕುರಿತಂತೆ ಮಂಗಳವಾರ ಸುದ್ದಿ ಮಾಡಿದ್ದವು.

Bar & Bench

ಕುತೂಹಲಕ್ಕೆ ಕಾರಣವಾಗಿದ್ದ ಮೇಕೆದಾಟು ಪ್ರಕರಣದ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿಲ್ಲ. ತಮಿಳುನಾಡು ಮತ್ತು ಕೇರಳಕ್ಕೆ ಸಂಬಂಧಿಸಿದ ಮುಲ್ಲಪೆರಿಯಾರ್‌ ಪ್ರಕರಣದ ಇಂದಿನ ವಿಚಾರಣೆ ವೇಳೆ ಹಿರಿಯ ವಕೀಲ ವಿ ಕೃಷ್ಣಮೂರ್ತಿ ಅವರು ʼಮುಲ್ಲಪೆರಿಯಾರ್‌ ಪ್ರಕರಣದೊಂದಿಗೆ ಮೇಕೆದಾಟು ಪ್ರಕರಣವನ್ನು ತಪ್ಪಾಗಿ ಪಟ್ಟಿ ಮಾಡಲಾಗಿದೆʼ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಎರಡೂ ಪ್ರಕರಣಗಳಿಗೂ ಸಂಬಂಧವಿಲ್ಲ ಎನ್ನುವುದನ್ನು ಒಪ್ಪಿದ ನ್ಯಾ. ಎ ಎಂ ಖಾನ್ವಿಲ್ಕರ್‌, ದಿನೇಶ್‌ ಮಹೇಶ್ವರಿ ಹಾಗೂ ಸಿ ಟಿ ರವಿಕುಮಾರ್‌ ಅವರಿದ್ದ ತ್ರಿಸದಸ್ಯ ಪೀಠ ಮುಲ್ಲಪೆರಿಯಾರ್‌ ಪ್ರಕರಣದ ವಿಚಾರಣೆಯಿಂದ ಮೇಕೆದಾಟು ಪ್ರಕರಣವನ್ನು ಬೇರ್ಪಡಿಸಿತು (ಡಿ-ಟ್ಯಾಗ್).

ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಮತ್ತು ಮುಕುಲ್ ರೋಹಟಗಿ ಅವರ ಮನವಿಯ ಮೇರೆಗೆ ಮೇಕೆದಾಟು ಅಣೆಕಟ್ಟಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಜನವರಿ 25ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿತು.

ಹಿನ್ನೆಲೆ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಸಮಗ್ರ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿತ್ತು. ಇದನ್ನು ವಿರೋಧಿಸಿ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಯೋಜನೆಗೆ ಅನುಮತಿ ನೀಡದಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಅದು ಕೋರಿತ್ತು. ಮುಖ್ಯ ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಎನ್‌ಜಿಟಿ ಆದೇಶವೊಂದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಮತ್ತೊಂದು ಮೇಲ್ಮನವಿ ಸಲ್ಲಿಸಿದೆ.

ಮೇಕೆದಾಟು ಯೋಜನೆ ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದ್ದು ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಭಾನುವಾರದಿಂದ (ಡಿ. 9) ಆರಂಭಿಸಿರುವ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಬೆಳವಣಿಗೆಗಳ ನಡುವೆಯೇ ಸುಪ್ರೀಂಕೋರ್ಟ್‌ ಪ್ರಕರಣವನ್ನು ಮಂಗಳವಾರ ನಡೆಯಬೇಕಿದ್ದ ಮುಲ್ಲಪೆರಿಯಾರ್‌ ಪ್ರಕರಣದೊಂದಿಗೆ ಪಟ್ಟಿ ಮಾಡಿತ್ತು. ಹೀಗಾಗಿ ರಾಜ್ಯದ ವಿವಿಧ ಮಾಧ್ಯಮಗಳು ಪ್ರಕರಣದ ವಿಚಾರಣೆ ಬಗ್ಗೆ ಮಂಗಳವಾರ ಸುದ್ದಿ ಮಾಡಿದ್ದವು.