Mullaperiyar dam, Kerala and Tamil Nadu
Mullaperiyar dam, Kerala and Tamil Nadu 
ಸುದ್ದಿಗಳು

[ಮುಲ್ಲಪೆರಿಯಾರ್‌ ಜಲಾಶಯ] ಕೇರಳದ ಆತಂಕ ಅಸಮಂಜಸವಾದದ್ದು ಎಂದು ಸುಪ್ರೀಂಗೆ ತಿಳಿಸಿದ ತಮಿಳುನಾಡು

Bar & Bench

ಕೇರಳ ಭೂಭಾಗದಲ್ಲಿದ್ದು ತಮಿಳುನಾಡಿನ ನಿರ್ವಹಣೆಯಲ್ಲಿರುವ ಮುಲ್ಲಪೆರಿಯಾರ್‌ ಜಲಾಶಯ ಹಾಗೂ ಅದರ ಭದ್ರತೆಯ ವಿಚಾರವಾಗಿ ವ್ಯವಸ್ಥಿತವಾದ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಬುಧವಾರ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸುಪ್ರೀಂ ಕೋರ್ಟ್‌ 2014ರಲ್ಲಿ ಹೊರಡಿಸಿರುವ ತೀರ್ಪಿನ ಪ್ರಕಾರ ಮುಲ್ಲಪೆರಿಯಾರ್‌ ಜಲಾಶಯದ ನೀರಿನ ಗರಿಷ್ಠ ಮಟ್ಟವು 142 ಅಡಿಗಳಷ್ಟಿದೆ. ಆದರೆ ಜಲಾಶಯದ ನೀರಿನ ಮಟ್ಟ 139 ಅಡಿ ಮೀರದಂತೆ ಖಾತರಿಪಡಿಸಬೇಕು ಎಂದು ಕೋರಿ ಕೇರಳ ಸರ್ಕಾರ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌ ಮತ್ತು ಸಿ ಟಿ ರವಿಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಕೇರಳ ಸರ್ಕಾರವು ನಿರಂತರವಾಗಿ ಜಲಾಶಯದ ಬಗ್ಗೆ ವ್ಯಕ್ತಪಡಿಸಿರುವ ಎಲ್ಲಾ ಕಳಕಳಿಯು ಅಸಮಂಜಸವಾಗಿದೆ” ಎಂದು ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶೇಖರ್‌ ನಾಫಡೆ ನ್ಯಾಯಾಲಯಕ್ಕೆ ತಿಳಿಸಿದರು. ಕೇರಳದಲ್ಲಿ ಮಳೆ ಕಡಿಮೆಯಾಗಿದ್ದು, ದೀಪಾವಳಿ ರಜೆಯ ಬಳಿಕ ವಿಚಾರಣೆ ನಡೆಸಬಹುದು ಎಂದರು.

ಕೇರಳದಲ್ಲಿ ಪ್ರವಾಹದ ಸಂದರ್ಭದಲ್ಲಿ ಜಲಾಶಯದ ನೀರಿನ ಮಟ್ಟವನ್ನು 139 ಅಡಿಗೆ ಸೀಮಿತಗೊಳಿಸಬೇಕು ಎಂದು 2018ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಮಾಡಿತ್ತು. ಸದ್ಯ ಕೇರಳದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಹೀಗಾಗಿ ಕೇರಳ ಸರ್ಕಾರವು ಜಲಾಶಯದ ನೀರಿನ ಮಟ್ಟವನ್ನು 139 ಅಡಿ ಮೀರದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಬೇಕು ಎಂದು ಮನವಿ ಮಾಡಿತ್ತು.

ಅಕ್ಟೋಬರ್‌ 25ರಂದು ಮನವಿಯ ವಿಚಾರಣೆ ನಡೆಸಿದ್ದ ಪೀಠವು ಜಲಾಶಯನ ನೀರಿನ ಗರಿಷ್ಠ ಮಟ್ಟದ ವಿಚಾರವು ಗಂಭೀರವಾಗಿದ್ದು, ನೀರಿನ ವಿಚಾರಕ್ಕೆ ಸಂಬಂಧಿಸಿದ ತಜ್ಞತೆ ನ್ಯಾಯಾಲಯಕ್ಕೆ ಇಲ್ಲ. ಹೀಗಾಗಿ, ಇದನ್ನು ನ್ಯಾಯಾಲಯ ನಿರ್ಧರಿಸಲಾಗದು ಎಂದಿತ್ತು. ಆದ್ದರಿಂದ ತಜ್ಞರ ಮೇಲ್ವಿಚಾರಣಾ ಸಮಿತಿ ರಚಿಸಿ, ವಾದಿ-ಪ್ರತಿವಾದಿಗಳ ಜೊತೆ ಚರ್ಚಿಸಿ ತುರ್ತಾಗಿ ನಿರ್ಧಾರ ಕೈಗೊಳ್ಳಲು ಆದೇಶ ಮಾಡಿತ್ತು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ಅವರು ಬುಧವಾರ “ತಜ್ಞರ ಸಮಿತಿಯು ಜಲಾಶಯದ ನೀರಿನ ಮಟ್ಟದಲ್ಲಿ ಬದಲಾವಣೆ ಮಾಡದಂತೆ ಹೇಳಿದೆ. 2014ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿರುವಂತೆ ಜಲಾಶಯದ ನೀರಿನ ಮಟ್ಟವು 142 ಅಡಿ ತಲುಪಬಹುದು ಎಂದಿದೆ” ಎಂದರು. ಆದರೆ, ಕೇರಳ ಸರ್ಕಾರವು ತಜ್ಞರ ಸಮಿತಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದರು.

ಜಲಾಶಯದ ಸುರಕ್ಷತೆಗೆ ಸಂಬಂಧಿಸಿದಂತೆ 2006ರಲ್ಲಿ ನಡೆಸಿದ್ದ ಸಮೀಕ್ಷೆ ಈಗಲೂ ಅನ್ವಯವಾಗುತ್ತದೆಯೇ? 2006ರಲ್ಲಿ ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ನಾವು ಈಗ 2021ರಲ್ಲಿ ಇದ್ದೇವೆ. ಸಮಿತಿ ಪರಿಶೀಲನೆ ನಡೆಸಿದೆಯೋ ಇಲ್ಲವೋ ಆತಂಕ ಅದೇ ಮಟ್ಟದಲ್ಲಿದೆಯೇ” ಎಂದು ನ್ಯಾಯಾಲಯ ಕೇಳಿತು.

ತಜ್ಞರ ಸಮಿತಿಯ ಸಭೆಯ ವಿಚಾರಗಳಿಗೆ ಸಂಬಂಧಿಸಿದಂತೆ ವಿಸ್ತೃತವಾದ ಲಿಖಿತ ಪ್ರತಿಕ್ರಿಯೆ ದಾಖಲಿಸಲಾಗುವುದು ಎಂದು ಕೇರಳ ಸರ್ಕಾರ ಹೇಳಿದ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿದೆ.