ಮುಂಬೈನ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಫೆಬ್ರವರಿ 25ರಂದು ಸ್ಫೋಟಕಗಳನ್ನು ತುಂಬಿದ್ದ ಎಸ್‌ಯುವಿ ವಾಹನ ಪತ್ತೆಯಾಗಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಜೆ ಅವರ ಕಸ್ಟಡಿ ಅವಧಿಯನ್ನು ಏಪ್ರಿಲ್ 3ರ ವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ವಿಸ್ತರಿಸಿದೆ.
ಬಂಧನ ಅವಧಿ ವಿಸ್ತರಿಸುವ ಆದೇಶ ಹೊರಡಿಸುವುದಕ್ಕೂ ಮುನ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಿ ಆರ್ ಸಿತ್ರೆ ಅವರ ಬಳಿ ತಾನು ಏನಾದರೂ ಹೇಳಬಹುದೇ ಎಂದು ವಜೆ ಕೋರಿದರು. ಇದಕ್ಕೆ ನ್ಯಾಯಾಲಯ ಅನುಮತಿಸಿದ ಬಳಿಕ “ನನ್ನನ್ನು ಬಲಿಪಶು ಮಾಡಲಾಗಿದೆ. ಸದರಿ ಅಪರಾಧದಲ್ಲಿ ನನ್ನ ಪಾತ್ರವೇನೂ ಇಲ್ಲ. ನಾನು ತನಿಖಾಧಿಕಾರಿಯಾಗಿರುವವರೆಗೆ ಪ್ರಕರಣದ ತನಿಖೆ ಮಾಡಿದ್ದೇನೆ. ನಾನಷ್ಟೇ ಅಲ್ಲ ಮುಂಬೈ ಪೊಲೀಸ್‌ನ ಅಪರಾಧ ವಿಭಾಗದ ಪೊಲೀಸರು ಏನೇನು ಮಾಡಬೇಕು ಮಾಡಿದ್ದಾರೆ. ತಕ್ಷಣವೇ ಕೆಲವೊಂದು ಬದಲಾವಣೆಗಳು ಆಗಿ ಹೋದವು. ನಾನೇ ಸ್ವಯಂಪ್ರೇರಿತವಾಗಿ ಎನ್‌ಐಎ ಬಳಿ ಹೋದೆ. ತಕ್ಷಣ ನನ್ನನ್ನು ಬಂಧಿಸಲಾಯಿತು. ಅಪರಾಧವನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಅದು ಸತ್ಯವಲ್ಲ” ಎಂದರು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 286 (ಸ್ಫೋಟಕಗಳ ಬಗ್ಗೆ ತಾತ್ಸಾರ), 465 (ನಕಲಿತನ), 473 (ನಕಲಿ ಮುದ್ರೆ), 506(2) (ಕ್ರಿಮಿನಲ್ ಬೆದರಿಕೆ) ಅಡಿ ಮಾರ್ಚ್ 8ರಂದು ಎನ್‌ಐಎ ಎಫ್‌ಐಆರ್ ದಾಖಲಿಸಿತ್ತು. ಶನಿವಾರ ರಾತ್ರಿ 11.50ಕ್ಕೆ ವಜೆ ಅವರನ್ನು ಬಂಧಿಸಿ, 13 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ ಬಳಿಕ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇದಕ್ಕೂ ಮುನ್ನ ವಜೆ ಅವರನ್ನು ಮಾರ್ಚ್ 14ರಂದು ಎನ್‌ಐಎ ವಶಕ್ಕೆ ನೀಡಲಾಗಿತ್ತು.
ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯಿದೆ (ಯುಎಪಿಎ) ಅಡಿ ಅಪರಾಧಗಳನ್ನು ಸೇರಿಸಿದ ಬಳಿಕ ವಜೆ ಅವರ ಕಸ್ಟಡಿ ಅವಧಿಯನ್ನು 30 ದಿನಗಳವರೆಗೆ ವಿಸ್ತರಿಸಬಹುದು ಎಂದು ಎನ್‌ಐಎ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದಿಸಿದರು. “ಇದು ಮುಂಬೈಗೆ ಮಾತ್ರ ಸೀಮಿತವಾದುದಲ್ಲ. ಇಡೀ ದೇಶಕ್ಕೆ ಅನ್ವಯಿಸುವ ಅತ್ಯಂತ ಗಂಭೀರ ಪ್ರಕರಣ. ಪೊಲೀಸರು ಭಾಗಿಯಾಗಿರುವ ಈ ಪ್ರಕರಣದ ಬಗ್ಗೆ ಎಲ್ಲರಿಗೂ ದಿಗಿಲಾಗಿದೆ… ಸ್ಫೋಟಕಗಳನ್ನು ಇಡಲಾಗಿದೆ… ಅವರೇ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ…” ಎಂದರು. ವಿಚಾರಣೆಯು ಪ್ರಮುಖ ಹಂತದಲ್ಲಿದೆ ಎಂದ ಸಿಂಗ್ ಅವರು ಸಾಕ್ಷ್ಯ ಸಂಗ್ರಹಿಸಿರುವುದರ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ವಜೆ ಅವರ ಕಸ್ಟಡಿ ಅವಧಿಯನ್ನು ಏಪ್ರಿಲ್ 3ರ ವರೆಗೆ ವಿಸ್ತರಿಸಿತು.