ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಜಾರಿ ನಿರ್ದೇಶನಾಲಯದ (ಇ ಡಿ) ಕಸ್ಟಡಿ ಅವಧಿಯನ್ನು ಆಗಸ್ಟ್ 8ರವರೆಗೆ ಮುಂಬೈ ನ್ಯಾಯಾಲಯ ವಿಸ್ತರಿಸಿದೆ.
"ನಿಸ್ಸಂಶಯವಾಗಿ ತನಿಖೆಯ ಸತ್ಯಗಳು ಮೂರು ಹಂತಗಳನ್ನು (ಹಣದ ತೊಡಗಿಸುವಿಕೆ, ಒಗ್ಗೂಡಿಸುವಿಕೆ ಹಾಗೂ ವರ್ಗಾವಣೆ) ಹೇಳುತ್ತಿವೆ. ಸಾಕ್ಷಿಗಳಿಗೆ ಸಮನ್ಸ್ ನೀಡಲು ಹಾಗೂ, ಆರೋಪಿಗಳನ್ನು ಮುಖಾಮುಖಿಯಾಗಿಸಲು ಹೆಚ್ಚಿನ ತನಿಖೆ ಅಗತ್ಯವಿದೆ. ಆದರೆ ಆಗಸ್ಟ್ 8ರವರೆಗೆ ಇದನ್ನೆಲ್ಲಾ ಮಾಡಬಹುದು ಎಂಬುದು ನನ್ನ ಅಭಿಪ್ರಾಯ. ಇಷ್ಟು ಕಾಲಾವಧಿಯಲ್ಲಿ ಇ ಡಿ ಎಲ್ಲವನ್ನೂ ತನಿಖೆ ಮಾಡಬಹುದು” ಎಂದು ನ್ಯಾಯಾಧೀಶ ಎಂ ಜಿ ದೇಶಪಾಂಡೆ ಅವರನ್ನೊಳಗೊಂಡ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಿಂದ ಇನ್ನಷ್ಟು ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಗಮನಾರ್ಹ ಪ್ರಗತಿಯಾಗಿದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು.
ರಾವುತ್, ಅವರ ಪತ್ನಿ, ಹಾಗೂ ಗೆಳೆಯ ಭಾಗಿಯಾಗಿದ್ದಾರೆ ಎನ್ನಲಾದ ಮುಂಬೈನ ಪತ್ರಾ ಚಾಲ್ ಭೂ ಹಗರಣ ಮತ್ತು ಅದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾವುತ್ ಅವರನ್ನು ಜುಲೈ 31 ರಂದು ಇ ಡಿ ಬಂಧಿಸಿತ್ತು. ರಾವುತ್, ಅವರ ಪತ್ನಿ ₹1 ಕೋಟಿಗೂ ಹೆಚ್ಚು ಹಣದ ನೇರ ಲಾಭ ಪಡೆದಿದ್ದಾರೆ ಎಂಬುದು ಇ ಡಿ ಆರೋಪವಾಗಿದೆ.